ಕೂಡಿಗೆ, ನ. 19: ಹಾರಂಗಿ ಜಲಾಶಯ ಮುಂಭಾಗದಲ್ಲಿರುವ ಉದ್ಯಾನವನವನ್ನು ತೋಟಗಾರಿಕಾ ಇಲಾಖೆಗೆ ವಹಿಸುವದರ ಮೂಲಕ ಅಭಿವೃದ್ಧಿ ಪಡಿಸಿ; ಪ್ರವಾಸೋಧ್ಯಮ ವನ್ನು ಅಭಿವೃದ್ಧಿಗೊಳಿಸುವ ಚಿಂತನೆ ನಡೆಸಲಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವದಾಗಿ ಮಡಿಕೇರಿ ಕ್ಷೇತ್ರದ ಶಾಸಕರ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು. ಹಾರಂಗಿಯ ತೋಟಗಾರಿಕಾ ಇಲಾಖೆಯ ಕ್ಷೇತ್ರಕ್ಕೆ ಭೇಟಿ ನೀಡಿ, ಶಾಸಕರು ಮಾತನಾಡಿದರು.ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಪ್ರಮುಖ ಆಕರ್ಷಣೀಯ ಕೇಂದ್ರವಾಗಿರುವ ಹಾರಂಗಿಯ ಉದ್ಯಾನವನದ ಜವಬ್ದಾರಿಯನ್ನು ತೋಟಗಾರಿಕೆ ಇಲಾಖೆಗೆ ವಹಿಸಿದಲ್ಲಿ, ಇಲಾಖೆಯ ಪರಿಣಿತ ತಾಂತ್ರಿಕ ಸಿಬ್ಬಂದಿ ವರ್ಗ ಇರುವದರಿಂದ ಉದ್ಯಾನವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರಿಯಾಗುತ್ತದೆ ಎಂದರು.

ಈಗಾಗಲೇ ಹಾರಂಗಿಯಲ್ಲಿರುವ 173 ಎಕರೆ ಪ್ರದೇಶದಲ್ಲಿ 75 ಎಕರೆ ಪ್ರದೇಶವು ಕೇಂದ್ರ ಮತ್ತು ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆಯ ಅನುದಾನದಲ್ಲಿ ಅಭಿವೃದ್ಧಿ ಗೊಂಡಿದೆ. ಅದರಂತೆ ಇನ್ನುಳಿದ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದರೆ ಹೆಚ್ಚು ಅನುದಾನ ತರಲು ಪ್ರಯತ್ನಿಸ ಲಾಗುವದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರವಾಸಿ ಕೇಂದ್ರಗಳ ಉದ್ಯಾನವನಗಳ ಜವಬ್ದಾರಿಯನ್ನು ತೋಟಗಾರಿಕಾ ಇಲಾಖೆಯೇ ವಹಿಸಿಕೊಂಡಿದ್ದು, ಹೆಚ್ಚು ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿವೆ. ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಅತ್ಯಾಕರ್ಷಕವಾಗಿ ಉದ್ಯಾನವನಗಳನ್ನು ಅಭಿವೃದ್ಧಿಪಡಿಸ ಲಾಗಿದೆ. ಆದ್ದರಿಂದ ನಮ್ಮ ಜಿಲ್ಲೆಯಲ್ಲಿರುವ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿನ ಉದ್ಯಾನವನ್ನು ತೋಟಗಾರಿಕಾ ಇಲಾಖೆಗೆ ವಹಿಸಲು ಚಿಂತನೆ ನಡೆಸಲಾಗಿದೆ ಎಂದರು.

ರಾಜ್ಯ ತೋಟಗಾರಿಕಾ ಸಚಿವರನ್ನು ಹಾಗೂ ನೀರಾವರಿ ಇಲಾಖೆಯ ಸಚಿವರನ್ನು ಹಾರಂಗಿಗೆ ಕರೆತಂದು ನಂತರ ತೋಟಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಸ್ಥಳಾವಕಾಶ ಇರುವದರಿಂದ ಈ ಪ್ರದೇಶಲ್ಲಿ ತೋಟಗಾರಿಕಾ ಕೇಂದ್ರವನ್ನು ತೆರೆಯುವ

(ಮೊದಲ ಪುಟದಿಂದ) ಮೂಲಕ ಜಿಲ್ಲೆಯ ಯುವಕರಿಗೆ ತೋಟಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸುವಲ್ಲಿ ಕ್ರಮಕೈಗೊಳ್ಳಲಾಗುವದು ಎಂದರು.

ಈ ಸಾಲಿನ ಅಧಿವೇಶನದಲ್ಲಿ ಹೆಚ್ಚು ಅನುದಾನವನ್ನು ನೀರಾವರಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಗೆ ಬಿಡುಗಡೆಗೊಳಿಸಲು ಒತ್ತಾಯಿಸಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಹಾರಂಗಿ ಅಣೆಕಟ್ಟೆಯ ಅಭಿವೃದ್ಧಿ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಇನ್ನಿತರ ಇಲಾಖೆಗಳನ್ನು ಅಭಿವೃದ್ಧಿ ಪಡಿಸಲಾಗುವದು ಎಂದರು.

ಈ ಸಂದರ್ಭ ಹಾರಂಗಿ ತೋಟ ಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರ ವರದರಾಜ್, ತಾ.ಪಂ ಸದಸ್ಯ ಗಣೇಶ್, ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಬಾಸ್ಕರ್ ನಾಯಕ್, ಕೂಡುಮಂಗಳೂರು ಸಹಕಾರ ಬ್ಯಾಂಕಿನ ನಿರ್ದೇಶಕರಾದ ಕೆ.ಕೆ. ಭೋಗಪ್ಪ, ಪ್ರಮುಖರಾದ ಭರತ್ ಮಾಚಯ್ಯ, ಗಿರೀಶ್, ಸುಮೇಶ್, ವಿಜಯಕುಮಾರ್, ಮಂಜು, ಕೃಷ್ಣ ಮೊದಲಾದವರು ಇದ್ದರು. -ಕೆ.ಕೆ. ನಾಗರಾಜಶೆಟ್ಟಿ