ವೀರಾಜಪೇಟೆ, ನ. 18: ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಒಬ್ಬರೇ ಭಾರತದ ಸಂವಿಧಾನವನ್ನು ರಚನೆ ಮಾಡಿಲ್ಲ ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಯನ್ನು ಖಂಡಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಇಂದು ತಾಲೂಕು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ವೀರಾಜಪೇಟೆ ತಾಲೂಕು ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಚಾಲಕ ಎಚ್.ಆರ್. ಪರಶುರಾಮ್ ಅವರು, ಡಾ. ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ರಚಿಸಿರುವ ವಿಚಾರ ವಿಶ್ವಕ್ಕೆ ತಿಳಿದಿದೆ. ಡಾ. ಅಂಬೇಡ್ಕರ್ ಸಂವಿಧಾನ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಗೊಂಡು ಆಗಿನ ಕೇಂದ್ರದ ಎಲ್ಲ ನಾಯಕರ ಸಲಹೆ, ಅಭಿಪ್ರಾಯವನ್ನು ಕ್ರೋಢೀಕರಿಸಿ ಸಂವಿಧಾನವನ್ನು ರಚಿಸಿದ್ದಾರೆ. ಕೋಮುವಾದಿ ಬಿಜೆಪಿ ಇದರ ಇತಿಹಾಸವನ್ನು ತಿರುಚಲು ಹೊರಟಿದೆ. ಜವಾಬ್ದಾರಿ ಹುದ್ದೆಯಲ್ಲಿರುವ ಶಿಕ್ಷಣ ಸಚಿವ ಕ್ಷುಲ್ಲಕ ಹೇಳಿಕೆಗಳಿಂದ ಸಮಾಜದಲ್ಲಿ ಶಾಂತಿ ಕದಡುವ ಕೆಲಸವಾಗುತ್ತಿದೆ. ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಹಿರಂಗ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದರು.
ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 74 ಕುಟುಂಬಗಳು ಗುಡಿಸಲು ಕಟ್ಟಿಕೊಂಡಿದ್ದು, ಸರಕಾರದಿಂದ ಯಾವದೇ ಮೂಲಭೂತ ಸೌಲಭ್ಯಗಳು ದೊರೆಯುತ್ತಿಲ್ಲ. ಎಲ್ಲ ಕುಟುಂಬಗಳಿಗೂ ಮೂಲಭೂತ ಸೌಲಭ್ಯ ಒದಗಿಸಬೇಕು. ಬಾಂಗ್ಲಾದೇಶದಿಂದ ಕೊಡಗಿಗೆ ವಲಸೆ ಬರುತ್ತಿರುವವರನ್ನು ತಡೆದು ಕೊಡಗಿನ ನೈಜ ಕಾರ್ಮಿಕರನ್ನು ಕಾರ್ಮಿಕರ ಕೆಲಸಕ್ಕೆ ನೇಮಕ ಮಾಡಿಕೊಳ್ಳುವಂತಾಗಬೇಕು ಎಂದರು.
ಪ್ರತಿಭಟನೆಯಲ್ಲಿ ಸಂಘಟನೆಯ ವಿಭಾಗೀಯ ಸಂಚಾಲಕ ಎಚ್.ಎಸ್. ಕೃಷ್ಣಪ್ಪ, ಪಿ.ಜೆ. ಸುಬ್ರಮಣಿ, ಆಂತರಿಕ ಶಿಸ್ತು ಸಮಿತಿ ತರಬೇತಿ ವಿಭಾಗದ ವಿ.ಆರ್. ರಜನಿಕಾಂತ್, ದಲಿತ ನೌಕರರ ಮತ್ತು ಕಾರ್ಮಿಕ ವಿಭಾಗದ ಶಿವಕುಮಾರ್, ಕಲಾ ಮಂಡಳಿಯ ಗಿರೀಶ್, ವಿದ್ಯಾರ್ಥಿ ಒಕ್ಕೂಟದ ಸತೀಶ್ ಮತ್ತಿತರರು ಪಾಲ್ಗೊಂಡಿದ್ದರು.