ಶ್ರೀಮಂಗಲ, ನ. 18: ದ. ಕೊಡಗಿನ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರ್ರಾಮಗಳಲ್ಲಿ ಬಿಲ್ ಪಾವತಿಸಲು ಬಾಕಿ ಇರುವ ವಿದ್ಯುತ್ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದ ಸೆಸ್ಕ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಗ್ರಾಮಸ್ಥರು ತಡೆದು ದಿಗ್ಬಂಧನ ಹಾಕಿ ತರಾಟೆಗೆ ತೆಗೆದುಕೊಂಡರು. ಗ್ರಾಮಗಳಿಗೆ ತೆರಳಿ ಸಂಪರ್ಕ ಕಡಿತ ಮಾಡುವದಕ್ಕೆ ಅವಕಾಶ ನೀಡದೆ ಪ್ರತಿಭಟನೆ ನಡೆಸಿದ ಗ್ರ್ರಾಮಸ್ಥರು ಇಲಾಖೆಯವರನ್ನು ವಾಪಸು ಕಳುಹಿಸಿದ ಪ್ರಸಂಗ ಎದುರಾಯಿತು.
ಸೋಮವಾರ ಎರಡು ಮೋಟಾರ್ ಬೈಕ್‍ನಲ್ಲಿ ಮಡಿಕೇರಿ ಯಿಂದ ಆಗಮಿಸಿದ ಸೆಸ್ಕ್ ಇಲಾಖೆಯ ಸ್ಟೋರ್‍ಕೀಪರ್ ಸುದೀಪ್ ಮತ್ತು ವಿದ್ಯುತ್ ತಂತಿ ಕತ್ತರಿಸುವ ಸಿಬ್ಬಂದಿ ಜಯಣ್ಣ ಅವರು ಸ್ಥಳೀಯ ಲೈನ್‍ಮೆನ್ ಗಳೊಂದಿಗೆ ವಿದ್ಯುತ್ ಬಾಕಿದಾರರ ಪಟ್ಟಿ ಸಹಿತ ಬಿರುನಾಣಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಕ್ಕೆ ಮುಂದಾ ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಜಮಾಯಿಸಿದ ಬಹುತೇಕ ರೈತರೇ ಅಗಿರುವ ಗ್ರಾಮಸ್ಥರು ವಿದ್ಯುತ್ ಸಂಪರ್ಕ ಕಡಿತ ಮಾಡುವದಕ್ಕೆ ಆಕ್ಷೇಪವ್ಯಕ್ತಪಡಿಸಿ ವಿದ್ಯುತ್ ಸಂಪರ್ಕ ಕಡಿತಕ್ಕೆ ತಡೆಯೊಡ್ಡಿದರು. ಈ ಸಂದರ್ಭ ಜಮಾಯಿಸಿದ ನೂರಾರು ರೈತರು ಇಲಾಖೆಯವರನ್ನು ದಿಗ್ಬಂಧನ ಹಾಕಿ ತರಾಟೆಗೆ ತೆಗೆದುಕೊಂಡರು.
ಬಿರುನಾಣಿ ಗ್ರಾ.ಪಂ. ಪ್ರಸಕ್ತ ವರ್ಷ ಸೇರಿದಂತೆ 2 ವರ್ಷದಿಂದ ಅತಿವೃಷ್ಟಿಗೆ ತುತ್ತಾಗಿದ್ದು, ವ್ಯಾಪಕ ಭೂ ಕುಸಿತ ಉಂಟಾಗಿದೆ. ತೀವ್ರತರದಲ್ಲಿ ಬೆಳೆಹಾನಿಯಾಗಿದ್ದು, ಈ ವ್ಯಾಪ್ತಿಯ ಗ್ರಾಮಸ್ಥರು ಸಂಕಷ್ಟದಲ್ಲಿದ್ದಾರೆ. 200-300 ಇಂಚು ಮಳೆ ಈ ವ್ಯಾಪ್ತಿಗೆ ಸುರಿದಿದ್ದು, ಎಲ್ಲಾ ಬೆಳೆ ನೆಲಕಚ್ಚಿದೆ. ಇಂತಹ ಸಮಯದಲ್ಲಿ ವಿದ್ಯುತ್ ಬಿಲ್ ಪಾವತಿಗೆ ಒತ್ತಾಯ ಮಾಡು ವದು ಹಾಗೂ ಉಳಿಸಿಕೊಂಡಿರುವ ಬಾಕಿ ಕಟ್ಟದಿದ್ದರೆ ಸಂಪರ್ಕ ಕಡಿತ ಮಾಡುತ್ತಿರುವದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಿಯಾಗಿ ವಿದ್ಯುತ್ ಇರುವದಿಲ್ಲ. ಹಲವೆಡೆ ವಿದ್ಯುತ್ ತಂತಿಗಳು ಜೋತುಬಿದ್ದಿದ್ದು. ಮನುಷ್ಯ ಕೈ ಎತ್ತಿದರೆ ತಂತಿ ತಗಲುವಷ್ಟು ಹತ್ತಿರದಲ್ಲಿ ಹಾದುಹೋಗಿದೆ. ರಾತ್ರಿ ಸಮಯದಲ್ಲಿ ನಿರಂತರವಾಗಿ ವಿದ್ಯುತ್ ಕಡಿತವಾ ಗುತ್ತಿದೆ. ವಿದ್ಯುತ್ ಕಡಿತವಾದರೆ ಇಲ್ಲಿ ದೂರವಾಣಿ ಸೇವೆಗಳು ಸಹ ಕಡಿತವಾಗುತ್ತದೆ. ಎಂದು ಗ್ರ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಸಂಕಷ್ಟದ ಸ್ಥಿತಿಯಲ್ಲಿ ವಿದ್ಯುತ್ ಬಿಲ್ ವಸೂಲಾತಿಗೆ ಬರುವದು ಬೇಡ. ವಿದ್ಯುತ್ ಸಂಪರ್ಕ ಕಡಿತಕ್ಕೆ ಮುಂದಾಗ ಬಾರದು. ಕಾಫಿ, ಕಾಳುಮೆಣಸು ಕುಯ್ದು ಮಾರಾಟ ಮಾಡುವ ಸಮಯ ವಾದ ಫೆಬ್ರವರಿ-ಮಾರ್ಚ್‍ನಲ್ಲಿ ವಿದ್ಯುತ್ ಬಿಲ್ ಪಾವತಿಗೆ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿ ಅಧಿಕಾರಿಗಳನ್ನು ಗ್ರಾಮಸ್ಥರು ವಾಪಸು ಕಳುಹಿಸಿದರು.
ಈ ಸಂದರ್ಭ ಗ್ರಾಮಸ್ಥರಾದ ಕರ್ತಮಾಡ ಮಿಲನ್, ಅಣ್ಣಳಮಾಡ ಮಂಜು, ಗಿರೀಶ್, ರಂಜಿ, ಕೀಕಣ ಮಾಡ ಮನು ಸೇರಿದಂತೆ ನೂರಾರು ಗ್ರಾಮಸ್ಥರು ಜಮಾಯಿಸಿದ್ದರು.