ಮಡಿಕೇರಿ, ನ. 19: ಇದು ಕೂಡ ಸರಕಾರದ ಒಂದು ಪ್ರಮುಖ ಇಲಾಖೆ, ಈ ಇಲಾಖೆಗೆ ಸಂಬಂಧಿಸಿದಂತೆ ಹಲವಷ್ಟು ಮಹತ್ವ ಪೂರ್ಣ ಯೋಜನೆಗಳು, ಜವಾಬ್ದಾರಿ ಕೂಡಾ ಇದೆ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿ ರುವವರೂ ಸರಕಾರಿ ನೌಕರರೇ ಆಗಿದ್ದಾರೆ. ಆದರೆ ಸರಕಾರ ಈ ಇಲಾಖೆಯನ್ನು ತೀರಾ ನಿರ್ಲಕ್ಷ್ಯ ಮಾಡುತ್ತಿರುವಂತೆ ಕಂಡು ಬರುತ್ತಿದೆ. ಸರಕಾರ ಜಾರಿಗೆ ತಂದಿರುವ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾದ ಜವಾಬ್ದಾರಿ ನಿರ್ವಹಿಸುತ್ತಿರುವ ಈ ಸರಕಾರಿ ಸಿಬ್ಬಂದಿಗಳು ಸೇರಿದಂತೆ ಹೊರ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಕರ್ತವ್ಯ ನಿಭಾಯಿಸುತ್ತಿರುವವರಿಗೆ ಕಳೆದ ಹಲವು ತಿಂಗಳಿನಿಂದ ಸಂಬಳವನ್ನೇ ನೀಡಲಾಗಿಲ್ಲ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳ ಕಥೆ ಇದಾಗಿದ್ದು; ಸಿಬ್ಬಂದಿಗಳು ಅತಂತ್ರತೆ ಯಲ್ಲಿ ಪರದಾಡುವಂತಾಗಿದೆ. ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿರುವ ಇಲಾಖೆಯ ಮುಖ್ಯ ಕಚೇರಿಯೂ ಸೇರಿದಂತೆ ಮೂರು ತಾಲೂಕುಗಳ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸು ತ್ತಿರುವ ಸಿಬ್ಬಂದಿಗಳಿಗೆ ಕಳೆದ ಜುಲೈ ತಿಂಗಳಿನಿಂದ ವೇತನ ಬಿಡುಗಡೆ ಯಾಗಿಲ್ಲ. ಸರಕಾರ ಹಾಗೂ ಸಂಬಂಧಿಸಿದಂತೆ ಇಲಾಖೆಯಿಂದ ಹಲವು ಲಕ್ಷಗಳು ಬಿಡುಗಡೆಯಾ ಗಬೇಕಿದ್ದು, ಹಣಕಾಸು ಇಲಾಖೆ ಯಿಂದ ಇದಕ್ಕೆ ಇನ್ನೂ ಹಸಿರು ನಿಶಾನೆ ಸಿಗುತ್ತಿಲ್ಲವೆನ್ನಲಾಗಿದೆ.
ಇಲಾಖೆಯ ಉಪನಿರ್ದೇಶಕರು, ಸಿಡಿಪಿಒಗಳು, ಸೂಪರ್ ವೈಸರ್‍ಗಳು ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಸಂಬಳ ರಹಿತ ದುಡಿಮೆಯಲ್ಲಿದ್ದು; ತಮ್ಮ ಬದುಕಿನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಈ ಕುರಿತಾಗಿ ಸಂಬಂಧಿಸಿದ ಇಲಾಖೆ ಹಾಗೂ ಸರಕಾರಕ್ಕೆ ಪದೇ ಪದೇ ಮನವಿ ಸಲ್ಲಿಸಲಾಗಿದ್ದರೂ ಈ ಬಗ್ಗೆ ಯಾವದೇ ಸ್ಪಂದನ ದೊರೆಯುತ್ತಿಲ್ಲವೆನ್ನಲಾಗಿದೆ.
ಆದರೆ, ಇದೇ ಇಲಾಖೆಗೆ ಸಂಬಂಧಿಸಿದಂತಿರುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿ ಯರಿಗೆ ವೇತನ ಸಿಗುತ್ತಿರುವದು ಗಮನಾರ್ಹವಾಗಿದೆ. ವೇತನ ಸಿಗದಿದ್ದ ಪಕ್ಷದಲ್ಲಿ ಅಂಗನವಾಡಿ ಕಾರ್ಯಕರ್ತೆ ಯರು, ಸಹಾಯಕಿಯರು ಬೃಹತ್ ಮುಷ್ಕರಕ್ಕೆ ಮುಂದಾಗುವ ಪರಿಸ್ಥಿತಿ ಯಿಂದಾಗಿ ಇವರುಗಳಿಗೆ ವೇತನ ಸಿಗುತ್ತಿದೆ ಎಂದೂ ಹೇಳಲಾಗುತ್ತಿವೆ.
ಇದರೊಂದಿಗೆ ಇಲಾಖೆಯ ಯೋಜನೆಗಳೂ ಸಾಕಷ್ಟಿದ್ದು, ಈ ಯೋಜನೆಗಳಿಗೂ ಅನುದಾನ ಲಭ್ಯವಾಗುತ್ತಿರುವದೂ ಗಮನಾರ್ಹ ವಾಗಿದೆ. ಸ್ತ್ರೀಶಕ್ತಿ, ಮಾತೃವಂದನಾ, ಮಾತೃಪೂರ್ಣ, ಮಾತೃಶ್ರೀ, ಚೇತನಾ, ಸಮೃದ್ಧಿ, ಉದ್ಯೋಗಿನಿ, ಭಾಗ್ಯಲಕ್ಷ್ಮಿ ಇನ್ನಿತರ ಯೋಜನೆಗಳಿಗೆ ಅನುದಾನ ದೊರೆಯುತ್ತಿದೆಯಾದರೂ, ಇದರ ಜವಾಬ್ದಾರಿ ನಿಭಾಯಿಸಬೇಕಾದ ಅಧಿಕಾರಿಗಳು, ಸಿಬ್ಬಂದಿ ವೇತನ ರಹಿತ ದುಡಿಮೆ ನಿಭಾಯಿಸುವಂತಾಗಿದೆ.
ಮಡಿಕೇರಿ ತಾಲೂಕಿಗೆ ಸುಮಾರು ರೂ. 58 ಲಕ್ಷ, ಸೋಮವಾರಪೇಟೆ ತಾಲೂಕಿಗೆ ರೂ. 28 ಲಕ್ಷ ಹಾಗೂ ಪೊನ್ನಂಪೇಟೆ ಕಚೇರಿಗೆ ರೂ. 22 ಲಕ್ಷದಷ್ಟು ಹಣ ಬಿಡುಗಡೆಗೆ ಬಾಕಿ ಇರುವದಾಗಿ ತಿಳಿದು ಬಂದಿದೆ.