ಮಡಿಕೇರಿ, ನ. 17: ದಕ್ಷಿಣ ಕೊಡಗಿನ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದ ಗಿರಿಜನ ಕಾಲೋನಿಗೆ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಜೆಡಿಎಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಪರ್ಮಾಲೆ ಎಂ. ಗಣೇಶ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಸೊಡ್ಲೂರು ಗ್ರಾಮದಲ್ಲಿ ಸುಮಾರು 72 ಕಾರ್ಮಿಕ ಕುಟುಂಬಗಳು ವಾಸವಿದ್ದು, ಯಾವದೇ ಸೌಕರ್ಯಗಳಿಲ್ಲದೆ ಅತಂತ್ರ ಪರಿಸ್ಥಿತಿಯಲ್ಲಿ ದಿನ ದೂಡುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಕಾರ್ಮಿಕ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿರುವದರಿಂದ ಆಡಳಿತ ವ್ಯವಸ್ಥೆ ಕಾಲೋನಿಗೆ ಯಾವದೇ ಸೌಲಭ್ಯಗಳನ್ನು ನೀಡದೆ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು.

ತಕ್ಷಣ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಎಚ್ಚೆತ್ತುಕೊಂಡು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡದಿದ್ದಲ್ಲಿ ಸ್ಥಳೀಯ ಎಲ್ಲಾ ನಿವಾಸಿಗಳು ಸಂಬಂಧಿಸಿದ ಇಲಾಖಾ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಂತಿ ಅಚ್ಚಪ್ಪ, ಪೊನ್ನಂಪೇಟೆ ತಾಲೂಕು ಅಧ್ಯಕ್ಷೆ ಪಡಿಕಲ್ ಕುಸುಮಾವತಿ, ಪ್ರಮುಖರಾದ ಪುಷ್ಪ ಹಾಗೂ ಮನು ಗೌಡ ಉಪಸ್ಥಿತರಿದ್ದರು.