ಕುಶಾಲನಗರ, ನ. 17: ಭಾಷೆ, ಉತ್ಕøಷ್ಟ ಸಾಹಿತ್ಯ ಹಾಗೂ ಶಿಲ್ಪಕಲೆಗಳನ್ನು ಹೊಂದಿದ ಶ್ರೀಮಂತ ನಾಡು ಕರ್ನಾಟಕವಾಗಿದ್ದು, ಒಳ್ಳೆಯ ಸಮಾಜದ ನಿರ್ಮಾಣ ಮಾಡುವ ಶಕ್ತಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಸಿ. ನಾಗಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಮಂಗಳೂರು ವಿಶ್ವ ವಿದ್ಯಾನಿಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ 64ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,
ಕರ್ನಾಟಕದ ಏಕೀಕರಣಕ್ಕಾಗಿ ಸುಮಾರು ವರ್ಷಗಳ ಸುದೀರ್ಘವಾದ ನಡೆಯ ಬಗ್ಗೆ ಹಾಗೂ ಅದಕ್ಕಾಗಿ ಹೋರಾಟ ಮಾಡಿದ ಮಹಾನೀಯರನ್ನು ನೆನೆಯುವದು ನಮ್ಮ ಆದ್ಯ ಕರ್ತವ್ಯವಾಗಿದೆ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ಸಂಯೋಜಕಿ ಡಾ. ಐ.ಕೆ. ಮಂಜುಳಾ ಮಾತನಾಡಿ, ವಿಶ್ವ ಮಾನವತೆಯನ್ನು ಪ್ರತಿಪಾದಿಸಿದ ಕನ್ನಡ ಸಾಹಿತ್ಯ ಚರಿತ್ರೆ ವಿಶ್ವದ ಚರಿತ್ರೆಯಲ್ಲೇ ಶ್ರೇಷ್ಠವಾದುದು. ಪಾಶ್ಚಾತ್ಯ ಭಾಷೆಯ ಪ್ರಭಾವದಿಂದಾಗಿ ನಮ್ಮ ತನವನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ನಮ್ಮ ನಾಡು ನುಡಿ, ಸಂಸ್ಕøತಿ ಹಾಗೂ ನಮ್ಮ ತನವನ್ನು ಉಳಿಸಿಕೊಳ್ಳುವ ಅಗತ್ಯತೆ ಇದೆ. ಇಡೀ ವಿಶ್ವದ ಮಾನವ ಕುಲಕ್ಕೆ ಕನ್ನಡ ಭಾಷೆ ಮತ್ತು ಸಾಹಿತ್ಯ ಮಾದರಿಯಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕಿ ಪ್ರೊ. ಮಂಜುಳಾ ಶಾಂತಾರಾಮ್ ಅವರು, ಅತೀ ಪ್ರಾಚೀನ ಇತಿಹಾಸವನ್ನು ಹೊಂದಿರುವ ಕೆಲವೇ ಕೆಲವು ಭಾಷೆಗಳಲ್ಲಿ ಕನ್ನಡ ಭಾಷೆಯು ಕೂಡ ಒಂದಾಗಿದ್ದು, ಸರ್ವಶ್ರೇಷ್ಠ ಕವಿಗಳು, ವಿದ್ವಾಂಸರು, ಕಾದಂಬರಿಕಾರರು ಹಾಗೂ ವಿಮರ್ಶಕರನ್ನು ಕೊಡುಗೆಯಾಗಿ ನೀಡಿರುವದರ ಜೊತೆಗೆ ಹಲವಾರು ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದುಕೊಂಡ ಶಾಸ್ತ್ರೀಯ ಭಾಷೆ ಎಂಬ ಹಿರಿಮೆಗೆ ಪಾತ್ರವಾಗಿದೆ ಎಂದರು.
ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಿ.ಎಸ್. ಶ್ರೀನಾಥ್, ವಿವಿಧ ವಿಭಾಗದ ಉಪನ್ಯಾಸಕ ವರ್ಗ, ಬೋಧಕೇತರ ವರ್ಗ, ತಾಂತ್ರಿಕ ವೃಂದ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.