ಮಡಿಕೇರಿ, ನ. 17: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಮಡಿಕೇರಿ, ಸಹಕಾರ ಇಲಾಖೆ, ಕೊಡಗು ಜಿಲ್ಲೆ, ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ 66 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ‘ಸಹಕಾರ ಸಂಸ್ಥೆಗಳಿಗಾಗಿ ಶಾಸನಾಧಿಕಾರಿ ರೂಪಿಸುವ’ ದಿನಾಚರಣೆ ನಂಜರಾಯ ಪಟ್ಟಣ ಪ್ಯಾಕ್ಸ್‍ನ ವಾಲ್ನೂರು ಶಾಖೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ನೆರವೇರಿಸಿ ಮಾತನಾಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಗ್ರಾಮೀಣ ಭಾಗದ ಜನರ ಬೇಡಿಕೆಗಳನ್ನು ಪೂರೈಸುವ ಸಹಕಾರ ಸಂಘಗಳು, ವಾಣಿಜ್ಯ ಬ್ಯಾಂಕ್‍ಗಳೊಂದಿಗೆ ಪೈಪೋಟಿಯಿಂದ ಕೆಲಸ ನಿರ್ವಹಿಸುತ್ತಿರುವದು ಹೆಮ್ಮೆಯ ವಿಷಯವಾಗಿದೆ.

ಪ್ರತಿಯೊಂದು ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು ಸಹಕಾರ ಕಾಯ್ದೆ, ಕಾನೂನಿನ ಪೂರ್ಣ ಪರಿಜ್ಞಾನವನ್ನು ಹೊಂದಿ ಸಂಘದ ಆಡಳಿತ ನಿರ್ವಹಣೆಯನ್ನು ಮಾಡಬೇಕಾಗಿದೆ.

ಅಲ್ಲದೆ ಪ್ರತಿಯೊಂದು ಸಂಘದಲ್ಲಿ ರೈತರು ಪಡೆದ ಸಾಲವನ್ನು ಸರಿಯಾದ ಸಮಯದಲ್ಲಿ ಮರುಪಾವತಿ ಮಾಡಿ ತಮ್ಮದೇ ಸಂಘವನ್ನು ಅಭಿವೃದ್ಧಿ ಪಡಿಸಲು ಕೈಜೋಡಿಸಬೇಕೆಂದು ಕರೆ ನೀಡಿದರು.

ಹಿರಿಯ ಸಹಕಾರಿಗಳಿಗೆ ಸನ್ಮಾನಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೆ.ಪಿ. ಗಣಪತಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವತಿಯಿಂದ ಜಿಲ್ಲೆಯ ರೈತರಿಗೆ ಹಲವಷ್ಟು ವಿಧದ ಸಾಲ ಸೌಲಭ್ಯವನ್ನು ಕಲ್ಪಿಸುತ್ತಿದ್ದು, ಅದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಹೇಳಿದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ ಬಿ.ಡಿ. ಮಂಜುನಾಥ್ ಮಾತನಾಡಿ, ಸ್ವ-ಸಹಾಯ ಗುಂಪುಗಳಿಗೆ ಸಹಕಾರ ಸಂಘಗಳಲ್ಲಿ ಮಾತ್ರ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆಯಾಗುತ್ತಿದ್ದು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕೆಂದರಲ್ಲದೆ ಹಾಗೂ ಇತರೆ ಖಾಸಗಿಯವರು ವಿತರಿಸುವ ಅಧಿಕ ಬಡ್ಡಿ ದರದ ಸಾಲವನ್ನು ಪಡೆದುಕೊಳ್ಳದಂತೆ ಕಿವಿಮಾತು ಹೇಳಿದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮತ್ತೋರ್ವ ನಿರ್ದೇಶಕ ಎಸ್.ಬಿ. ಭರತ್ ಕುಮಾರ್ ಹಾಗೂ ಬಸವನಹಳ್ಳಿ ಲ್ಯಾಂಪ್ಸ್ ಅಧ್ಯಕ್ಷ ಎಸ್.ಎನ್. ರಾಜಾರಾವ್ ಮಾತನಾಡಿದರು. ದಿನದ ಮಹತ್ವದ ಕುರಿತು ಭಾಗಮಂಡಲದ ಕಾವೇರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಜೆ. ದಿವಾಕರ್ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂಜರಾಯಪಟ್ಟಣ ಪ್ಯಾಕ್ಸ್‍ನ ಅಧ್ಯಕ್ಷ ಬಿ.ಸಿ. ಮಾದಯ್ಯ ವಹಿಸಿದ್ದರು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪಿ.ಸಿ. ಅಚ್ಚಯ್ಯ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕಿ ಉಷಾ ತೇಜಸ್ವಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಚ್.ಎನ್. ರಾಮಚಂದ್ರ, ಬಿ.ಎ. ರಮೇಶ್ ಚಂಗಪ್ಪ, ವಾಲ್ನೂರು ಸಹಕಾರ ದವಸ ಭಂಡಾರದ ಅಧ್ಯಕ್ಷ ಎ.ವಿ. ಶಾಂತಕುಮಾರ್, ನಂಜರಾಯಪಟ್ಟಣ ಎಂ.ಪಿ.ಸಿ.ಎಸ್. ಅಧ್ಯಕ್ಷ ಎಸ್.ಡಿ. ಉದಯ, ರಂಗಸಮುದ್ರ ಸಹಕಾರ ದವಸ ಭಂಡಾರದ ಅಧ್ಯಕ್ಷ ಪಿ.ಎಸ್. ಬಸಪ್ಪ, ಗುಡ್ಡೆಹೊಸೂರು ಎಂ.ಪಿ.ಸಿ.ಎಸ್. ಅಧ್ಯಕ್ಷ ವಿ.ವಿ. ಮೋಹನ್ ಕುಮಾರ್, ಸೋಮವಾರ ಪೇಟೆ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಈ. ಮೋಹನ್ ಉಪಸ್ಥಿತರಿದ್ದರು.