ವೀರಾಜಪೇಟೆ, ನ. 17: ವೀರಾಜಪೇಟೆ ಪ್ರೀಮಿಯರ್ ಲೀಗ್ ದ್ವಿತೀಯ ಅವೃತ್ತಿಯ ಅಟಗಾರರ ಹರಾಜು ಪ್ರಕ್ರಿಯೆಗಳು ಅಂತಿಮಗೊಂಡಿತು.
ವೀರಾಜಪೇಟೆ ನಗರದ ಯೂತ್ ಫ್ರೆಂಡ್ಸ್ ಸಂಸ್ಥೆಯು ಅಯೋಜಿಸುತ್ತಿರುವ ವೀರಾಜಪೇಟೆ ಪ್ರೀಮಿಯರ್ ಲೀಗ್ ಎರಡನೇ ಅವೃತ್ತಿಯ ಅಟಗಾರರ ಹರಾಜು ಪ್ರಕ್ರಿಯೆಗಳು ನಗರದ ಹೊರವಲಯದಲ್ಲಿರುವ ಮಗ್ನೋಲಿಯ ಖಾಸಗಿ ಹೊಟೇಲ್‍ನಲ್ಲಿ ಜರುಗಿತು. ಅಟಗಾರರ ಬಿಡ್ ಕಾರ್ಯಕ್ರಮಕ್ಕೆ ಭಾ.ಜ.ಪ. ಮುಖಂಡ ಜೋಕಿಂ ರೋಡ್ರಿಗ್ರಸ್ ಮತ್ತು ಉದ್ಯಮಿ ಮೊಯಿನ್ ಮುಖ್ಯ ಅತಿಥಿಗಳಾಗಿ ಅಗಮಿಸಿ ಅಟಗಾರರರಿಗೆ ಶುಭ ಹಾರೈಸಿದರು. ಒಟ್ಟು 200 ಆಟಗಾರರಲ್ಲಿ 140 ಮಂದಿ ಅಟಗಾರರು ನಗರದ 12 ಪ್ರತಿಷ್ಠಿತ ಕ್ರಿಕೆಟ್ ತಂಡಗಳಲ್ಲಿ ಅಟವಾಡಲು ಆಯ್ಕೆಯಾದರು.
ತಾ. 24ರಿಂದ ಕ್ರೀಡಾ ಉತ್ಸವವು ಆರಂಭವಾಗಲಿದ್ದು, ತಾ. 29 ರಂದು ಅಂತಿಮ ಪಂದ್ಯಾಟಗಳು ನಡೆಯಲಿವೆ. ಅಂತಿಮ ಪಂದ್ಯಾಟವನ್ನು ವೀಕ್ಷಿಸಲು ಖ್ಯಾತ ಬಹುಬಾಷೆ ನಟಿ ಕೊಡಗಿನ ರಶ್ಮಿಕಾ ಮಂದಣ್ಣ ಆಗಮಿಸಲಿದ್ದಾರೆ ಮತ್ತು ಕ್ರೀಡಾ ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ಅಯೋಜಕರು ತಿಳಿಸಿದ್ದಾರೆ.