ಕುಶಾಲನಗರ, ನ. 17: ನಾಗರಹೊಳೆ ಅಭಯಾರಣ್ಯಕ್ಕೆ ಕೊಡಗು-ಮೈಸೂರು ಭಾಗದ 7 ಮೀಸಲು ಅರಣ್ಯಗಳು ವಿಲೀನಗೊಂಡ ಬೆನ್ನಲ್ಲೇ ಹುಣಸೂರು ಗೋಣಿಕೊಪ್ಪ ಹೆದ್ದಾರಿ ರಸ್ತೆಯಲ್ಲಿರುವ ಅರಣ್ಯ ತಪಾಸಣಾ ಕೇಂದ್ರ ಸೇರಿದಂತೆ ಹೆದ್ದಾರಿ ರಸ್ತೆಯನ್ನು ವನ್ಯಜೀವಿ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.
ಈ ಸಂಬಂಧ ರಾಜ್ಯ ಅರಣ್ಯ ಇಲಾಖೆಯಿಂದ ವೀರಾಜಪೇಟೆ ವಿಭಾಗ ಅಧಿಕಾರಿಗಳಿಗೆ ಆದೇಶ ಬಂದ ಹಿನ್ನೆಲೆಯಲ್ಲಿ ಈ ಹಿಂದೆ ತಪಾಸಣಾ ಕೇಂದ್ರದಲ್ಲಿ ಹಾಗೂ ಆ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 10ಕ್ಕೂ ಅಧಿಕ ಸಿಬ್ಬಂದಿಯನ್ನು ಕೂಡ ವನ್ಯಜೀವಿ ವಿಭಾಗಕ್ಕೆ ನಿಯೋಜಿಸಲು ಕ್ರಮಕೈಗೊಳ್ಳಲಾಗಿದೆ.
ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ ಈ ವರ್ಷದ ಆಗಸ್ಟ್ ತಿಂಗಳಿನಿಂದ ಕೊಡಗು ಜಿಲ್ಲೆಯ ತಿತಿಮತಿ, ದೇವಮಚ್ಚಿ, ಮಾವುಕಲ್ ವ್ಯಾಪ್ತಿಯ 70 ಚದರ ಕಿಮೀ ಮೀಸಲು ಅರಣ್ಯ ಸೇರಿದಂತೆ ಒಟ್ಟು 200 ಚದರ ಕಿಮೀ ವ್ಯಾಪ್ತಿಯ ಮೀಸಲು ಅರಣ್ಯ ಸೇರ್ಪಡೆಗೊಳಿಸಲಾಗಿತ್ತು.
ಇದೀಗ ಹುಣಸೂರು, ಆನೆಚೌಕೂರು, ಗೋಣಿಕೊಪ್ಪ ರಸ್ತೆಯಲ್ಲಿರುವ ಅರಣ್ಯ ತಪಾಸಣಾ ಗೇಟ್ ವನ್ಯಜೀವಿ ವಿಭಾಗಕ್ಕೆ ಹಸ್ತಾಂತರಗೊಂಡಿರುವದಾಗಿ ತಿಳಿದುಬಂದಿದೆ. ಈ ರಸ್ತೆ ಮೂಲಕ ಅಂತರ್‍ರಾಜ್ಯ ಮಟ್ಟದಲ್ಲಿ ಭಾರೀ ಪ್ರಮಾಣದ ಮರ ಮತ್ತಿತರ ನಿರ್ಭಂದಿತ ವಸ್ತುಗಳು ಕಳ್ಳಸಾಗಾಣಿಕೆಯಾಗುತ್ತಿದ್ದು ಇದರ ನಿಯಂತ್ರಣಕ್ಕೆ ವನ್ಯಜೀವಿ ವಿಭಾಗದ ಅಧಿಕಾರಿ ಸಿಬ್ಬಂದಿಗಳು ಹೆಚ್ಚಿನ ಕಾರ್ಯಯೋಜನೆ ಸಿದ್ದಪಡಿಸಬೇಕಾಗಿದೆ.
-ಸಿಂಚು