ಕುಶಾಲನಗರ, ನ. 17: ಕುಶಾಲನಗರ ಗಣಪತಿ ದೇವಸ್ಥಾನ ವಾರ್ಷಿಕ ಜಾತ್ರೆ ಅಂಗವಾಗಿ 99ನೇ ಗೋಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಐತಿಹಾಸಿಕ ಪರಂಪರೆಯ ಜಾತ್ರೆ ರಥೋತ್ಸವ ಹಿನ್ನೆಲೆಯಲ್ಲಿ ಕುಶಾಲನಗರ ಸೇರಿದಂತೆ ಸುತ್ತಮುತ್ತ ಜಿಲ್ಲೆಗಳ ರೈತರು ವಿವಿಧ ತಳಿಯ ಜಾನುವಾರುಗಳಾದ ಜೋಡು ಎತ್ತುಗಳು, ಜರ್ಸಿ ಹಸುಗಳು, ಹೋರಿಗಳು, ಮಿಶ್ರ ತಳಿ ಜಾನುವಾರುಗಳು ಈ ಬಾರಿ ಗೋಪ್ರದರ್ಶನದಲ್ಲಿ ಪಾಲ್ಗೊಂಡ ದೃಶ್ಯ ಕಂಡುಬಂತು. ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ನಡೆಯುವ ಗೋಪ್ರದರ್ಶನ ಮತ್ತು ಜಾತ್ರೆ ಅಂಗವಾಗಿ ಸ್ಥಳೀಯ ಸೋಮೇಶ್ವರ ದೇವಾಲಯ ಬಳಿಯಿಂದ ಮೆರವಣಿಗೆಯಲ್ಲಿ ರೈತರು ತಮ್ಮ ಜಾನುವಾರುಗಳನ್ನು ಕರೆದೊಯ್ದರು. ಇದರೊಂದಿಗೆ 3 ದಿನಗಳ ಕಾಲ ನಡೆಯಲಿರುವ ದನಗಳ ಜಾತ್ರೆಗೆ ಇಂದು ಅದ್ದೂರಿಯಾಗಿ ಚಾಲನೆ ದೊರೆಯಿತು.ರೈತರಿಗೆ ತಮ್ಮ ಗೋವುಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಕುಶಾಲನಗರ ಗಣಪತಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸಿದೆ. ಗುಂಡೂರಾವ್ ಬಡಾವಣೆಯ

(ಮೊದಲ ಪುಟದಿಂದ) ಮೈದಾನದ ಜಾತ್ರಾ ಮೈದಾನದಲ್ಲಿ ಹಿರಿಯ ರೈತರಾದ ಭುವನಗಿರಿಯ ಜವರಪ್ಪ ಅವರು ಗೋವುಗಳನ್ನು ಬರಮಾಡಿಕೊಂಡರು. ಗೋಪ್ರದರ್ಶನ ದಲ್ಲಿ ಬೃಹತ್ ಗಾತ್ರದ ಜೋಡಿ ಹೋರಿಗಳು ನೆರೆದವರನ್ನು ಆಕರ್ಷಿಸಿದವು. ಸುಮಾರು 3 ಲಕ್ಷ ಮೌಲ್ಯದ ಈ ಹೋರಿ ಹಳ್ಳಿಕಾರ್ ತಳಿಯದ್ದಾಗಿದ್ದು ಅರಕಲಗೂಡಿನ ರೈತರಾದ ಪ್ರದೀಪ್ ಎಂಬವರು ಇದರ ಮಾಲೀಕರಾಗಿದ್ದಾರೆ.

ಸುತ್ತಮುತ್ತಲಿನ ನೂರಾರು ರೈತರು ಈ ಗೋ ಜಾತ್ರೆಯಲ್ಲಿ ಪಾಲ್ಗೊಂಡಿದ್ದು 3 ದಿನಗಳ ಕಾಲ ದನಗಳಿಗೆ ಬೇಕಾದ ನೆರಳು, ಹುಲ್ಲು ಮತ್ತಿತರ ವ್ಯವಸ್ಥೆಯನ್ನು ಸಮಿತಿ ಕಲ್ಪಿಸಿದೆ. ಇದರೊಂದಿಗೆ ಜಾನುವಾರುಗಳ ಮಾಲೀಕರಿಗೆ ಊಟ ತಿಂಡಿ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.