ಕಣಿವೆ, ನ. 17: ಕೊಡಗು ಜಿಲ್ಲಾ ವೀರಶೈವ ಸಮಾಜದ ವತಿಯಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಬಸವನಹಳ್ಳಿಯ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಕ್ರೀಡಾ ಕೂಟವನ್ನು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕ್ರೀಡಾ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕ್ರೀಡೆ ಎಂಬದು ಮನುಷ್ಯನ ಆರೋಗ್ಯದ ದೃಷ್ಠಿಯಿಂದ ಬಹು ಪ್ರಮುಖವಾಗಿದೆ. ಅಬಾಲವೃದ್ಧರಾದಿಯಾಗಿ ಎಲ್ಲರೂ ಕ್ರೀಡೆಗಳಲ್ಲಿ ನಿತ್ಯವೂ ಪಾಲ್ಗೊಳ್ಳಬೇಕು ಎಂದರು.ಕ್ರೀಡಾ ಕಾರ್ಯಕ್ರಮಕ್ಕೂ ಮುನ್ನಾ ಕುಶಾಲನಗರದ ಕೊಪ್ಪ ಗೇಟ್‍ನಿಂದ ಬಸವನಹಳ್ಳಿಯವರೆಗೆ ಬೈಕ್ ಜಾಥಾ ನಡೆಯಿತು. ವಾಹನವೊಂದರಲ್ಲಿ ಕ್ರೀಡಾ ಕೂಟದ ವಿಜೇತರಿಗೆ ನೀಡುವ ಶೀಲ್ಡ್ ಒಂದನ್ನು ಇಟ್ಟು ಮೆರವಣಿಗೆಯಲ್ಲಿ ತರಲಾಯಿತು. ಕ್ರೀಡಾ ಕೂಟದಲ್ಲಿ ಮಕ್ಕಳಿಗೆ ಕಾಳು ಹೆರಕುವ ಸ್ಪರ್ಧೆ, 50 ಮೀ.ಓಟದ ಸ್ಪರ್ಧೆ, ಒಂಟಿಕಾಲು ಓಟ, ಬಲೂನ್ ಒಡೆಯುವದು, ಗೋಣಿ ಚೀಲ ಓಟ, ನಿಂಬೆ ಚಮಚ ಓಟ, ನಿಧಾನ ಸೈಕಲ್ ಸ್ಪರ್ಧೆ, ಮಹಿಳೆಯರಿಗೆ ಭಾರದ ಗುಂಡು ಎಸೆತ, ವಿಷದ ಚೆಂಡು, ರಂಗೋಲಿ ಸ್ಪರ್ಧೆ, ಬಕೆಟ್ ಗೆ ಬಾಲ್ ಹಾಕುವ ಸ್ಪರ್ಧೆ, ಸಂಗೀತ ಕುರ್ಚಿ ಮೊದಲಾದವು ನಡೆದವು. ಕಾರ್ಯಕ್ರಮದಲ್ಲಿ ಅಮ್ಮತ್ತಿ ಕನ್ನಡ ಮಠದ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ, ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ,

(ಮೊದಲ ಪುಟದಿಂದ) ಸೋಮವಾರಪೇಟೆ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಹಾಲಪ್ಪ, ವೀರಾಜಪೇಟೆ ತಾಲೂಕಿನ ಅಧ್ಯಕ್ಷ ಸಂದೀಪ್, ಮಡಿಕೇರಿ ತಾಲೂೀಕು ಅಧ್ಯಕ್ಷ ರುದ್ರಪ್ರಸನ್ನ ವೀರಶೈವ ಸಮಾಜದ ಕ್ರೀಡಾ ಸಮಿತಿ ಸಂಚಾಲಕ ಎಸ್. ಮಹೇಶ್ ಇದ್ದರು. ಕ್ರೀಡಾ ಕಾರ್ಯಕ್ರಮದಲ್ಲಿ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ರಾಜ್ಯ ತರಬೇತುದಾರರಾದ ದೇವರಾಜಮ್ಮ, ಅಥ್ಲೆಟಿಕ್ ತಾರೆ ಸಿಂಧು ಭರತ್, ಸೈಕ್ಲಿಸ್ಟ್‍ಗಳಾದ ರಜನೀಶ್, ಸಂದೀಪ್ ಮೊದಲಾದವರನ್ನು ಇದೇ ಸಂದರ್ಭದಲ್ಲಿ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.