ಸೋಮವಾರಪೇಟೆ, ನ. 17: ನೇಣು ಬಿಗಿದುಕೊಂಡು ತಾಯಿ ಮತ್ತು ಮಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ಚೌಡ್ಲು ಗ್ರಾಮದ ಆಲೇಕಟ್ಟೆ ರಸ್ತೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.ಆಲೇಕಟ್ಟೆ ರಸ್ತೆ ನಿವಾಸಿ ದಿ. ಗಂಗಾಧರ್ ಅವರ ಪತ್ನಿ ತಂಗಮಣಿ (55) ಮತ್ತು ಪುತ್ರ ಹರೀಶ್ (26) ಎಂಬವರುಗಳೇ ಆತ್ಮಹತ್ಯೆಗೆ ಶರಣಾದವರು. ಕೂಲಿ ಕೆಲಸ ಮಾಡುತ್ತಿದ್ದ ತಂಗಮಣಿ ಅವರು ಇಂದು ಮಧ್ಯಾಹ್ನ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಆಟೋ ಚಾಲಕನಾಗಿರುವ ಮಗ ಹರೀಶ್, ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ.ತಕ್ಷಣ ತನ್ನ ಸಂಬಂಧಿಕರಿಗೆ ವಿಷಯ ತಿಳಿಸಿದ ಮೇರೆ, ಮನೆಗೆ ಆಗಮಿಸಿದ ಸಂಬಂಧಿಕರು ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಲೆಂದು ತೆರಳಿದ ಸಂದರ್ಭ, ಹರೀಶ್ ಮನೆಯೊಳಗೆ ತೆರಳಿ ಪಂಚೆಯಿಂದ ನೇಣು ಬಿಗಿದುಕೊಂಡಿದ್ದಾರೆ.

ಕಳೆದ 9 ತಿಂಗಳ ಹಿಂದೆ ಆಲೇಕಟ್ಟೆ ರಸ್ತೆಯ ಸಿದ್ದೇಶ್ವರ ಟಯರ್ ವರ್ಕ್ ಸಮೀಪದ ಯುವತಿಯನ್ನು ವಿವಾಹವಾಗಿದ್ದ ಹರೀಶ್‍ನ ದಾಂಪತ್ಯ ಜೀವನ ಸರಿಯಾಗಿರಲಿಲ್ಲ. ಆತನ ಪತ್ನಿ ಕೇವಲ 15 ದಿನಗಳ ಕಾಲ ಮಾತ್ರ ಹರೀಶನ ಮನೆಯಲ್ಲಿದ್ದು, ನಂತರ ತವರುಮನೆ ಸೇರಿಕೊಂಡಿದ್ದಳು. ಹರೀಶ್ ಆಗಾಗ್ಗೆ ಆಕೆಯನ್ನು ಕರೆತರಲು ಯತ್ನಿಸಿದರೂ ಫಲಕಾರಿಯಾಗಿರಲಿಲ್ಲ.ಈ ಮಧ್ಯೆ ಹರೀಶನ ಪತ್ನಿ ವಿವಾಹ ವಿಚ್ಚೇದನ ಸಹಿತ ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಇದರಿಂದಾಗಿ ತಂಗಮಣಿ ಮತ್ತು ಹರೀಶ್ ಅವರುಗಳು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರು. ಈ ಬಗ್ಗೆ ಸಂಬಂಧಿಕರು ಮತ್ತು ಸ್ಥಳೀಯರೊಂದಿಗೆ ಆಗಾಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದರು ಎನ್ನಲಾಗಿದೆ.ಇಂದು ಮಧ್ಯಾಹ್ನ 2.30ರ ಸುಮಾರಿಗೆ ತಂಗಮಣಿ ಅವರು ತಮ್ಮ ಮನೆಯಲ್ಲಿ ಪಂಚೆಯಿಂದ ನೇಣು ಬಿಗಿದುಕೊಂಡಿದ್ದು, ಇದನ್ನು ಗಮನಿಸಿದ ಮಗ ಹರೀಶ್ ಮಧ್ಯಾಹ್ನ 2.45ರ ಸುಮಾರಿಗೆ ನೇಣಿಗೆ ಶರಣಾಗಿ ಇಹಲೋಕ ತ್ಯಜಿಸಿದ್ದಾನೆ. ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಸೇರಿದಂತೆ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದು, ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.