*ಗೋಣಿಕೊಪ್ಪಲು, ನ. 16 : ಕಸದಿಂದ ರಸ ತೆಗೆಯುತ್ತೇನೆ ಎಂದುಕೊಂಡು ಗೋಣಿಕೊಪ್ಪಲು ಪಟ್ಟಣದ ಕಸವನ್ನೆಲ್ಲ ತಂದು ಹಾತೂರು ಗ್ರಾ.ಪಂ. ವ್ಯಾಪ್ತಿಯ ಕಾಫಿ ತೋಟದಲ್ಲಿ ಹಾಕಿಕೊಂಡ ವ್ಯಕ್ತಿಯ ಅವೈಜ್ಞಾನಿಕ ಕ್ರಿಯೆಯಿಂದ ಗ್ರಾಮದ ತುಂಬಾ ಗಬ್ಬು ನಾರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಸ್ಥಳೀಯರು ಈ ವ್ಯವಸ್ಥೆಯ ಮೇಲೆ ಅಸಮಾಧಾನಗೊಂಡಿದ್ದಾರೆ.
ಹಾತೂರು ಗ್ರಾಮ ಪಂಚಾಯಿತಿಯ ಕೊಳತೋಡು ಬೈಗೋಡು ಗ್ರಾಮದ ನಿವಾಸಿಯ ಈ ಕಾರ್ಯಕ್ಕೆ ಗ್ರಾಮಸ್ಥರು ರೋಸಿ ಹೋಗಿದ್ದು, ಪ್ರತಿಭಟನೆ ನಡೆಸುವ ಹಾದಿಯತ್ತ ಸಾಗಿದ್ದಾರೆ.
ಗೋಣಿಕೊಪ್ಪಲು ಪಟ್ಟಣದ ತ್ಯಾಜ್ಯಗಳನ್ನು ಗೊಬ್ಬರವಾಗಿಸಲು ತನ್ನ ತೋಟದಲ್ಲಿ ಸಂಗ್ರಹಿಸುವ ಈ ಕಾರ್ಯದಿಂದಾಗಿ ಗ್ರಾಮದ ತುಂಬಾ ತ್ಯಾಜ್ಯದ ದುರ್ವಾಸನೆ ಹರಡುತ್ತಿದೆ. ಗ್ರಾಮದಲ್ಲಿ ವಾಸಿಸಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿ ಸ್ಥಳೀಯ ಪಂಚಾಯಿತಿಗೆ ದೂರು ಸಲ್ಲಿಸಿದ್ದಾರೆ.
ಗ್ರಾಮಸ್ಥರ ದೂರನ್ನು ಪರಿಗಣಿಸಿದ ಪಂಚಾಯಿತಿ ತ್ಯಾಜ್ಯ ಸಂಗ್ರಹಿಸಿಕೊಳ್ಳುತ್ತಿರುವ ವ್ಯಕ್ತಿಯ ವಿರುದ್ಧ ಎಚ್ಚರಿಕೆಯ ನೋಟೀಸ್ ನೀಡಿ ದಂಡ ವಿಧಿಸಿದೆ. ಆದರೂ ಎಚ್ಚೆತ್ತುಕೊಳ್ಳದ ಗ್ರಾಮದ ನಿವಾಸಿ ಪಂಚಾಯಿತಿಯ ವ್ಯವಸ್ಥೆಗೆ ಗೌರವ ತೋರದೆ ಪದೇ ಪದೇ ಕಸವನ್ನು ಸಂಗ್ರಹಿಸಿಕೊಳ್ಳುತ್ತಿರುವದರ ವಿರುದ್ಧ ಪಂಚಾಯಿತಿ ಕಿಡಿಕಾರಿದೆ. ಕಾನೂನು ಕ್ರಮ ಕೈಗೊಳ್ಳುವ ಚಿಂತನೆ ಹರಿಸಿದೆ.
ಕಸ ಸಂಗ್ರಹಿಸಿ ಗೊಬ್ಬರ ಮಾಡುವ ನಿಟ್ಟಿನಲ್ಲಿ ಗ್ರಾಮದ ಮುಖ್ಯ ರಸ್ತೆಯ ಸಮೀಪದಲ್ಲೇ ತ್ಯಾಜ್ಯಗಳನ್ನು ಹಾಕುತ್ತಿರುವದರಿಂದ ಈ ಮಾರ್ಗದಲ್ಲಿ ಸಂಚರಿಸುವದೇ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸತ್ತ ನಾಯಿ, ಕೋಳಿಯ ತ್ಯಾಜ್ಯಗಳು ಯಥೇಚ್ಚÀವಾಗಿ ಇರುವದರಿಂದ ದುರ್ವಾಸನೆ ಬೀರುತ್ತಿದೆ. ಪರಿಣಾಮ ಬೀದಿ ನಾಯಿಗಳ ಹಾವಳಿಯು ಹೆಚ್ಚಾಗಿದ್ದು, ಈ ಮಾರ್ಗದಲ್ಲಿ ಮಕ್ಕಳು ಸಂಚರಿಸಲು ಭಯದ ವಾತವರಣ ನಿರ್ಮಾಣವಾಗಿದೆ.
ಕಸ ಸಂಗ್ರಹಿಸುವ ವ್ಯವಸ್ಥೆಯಿಂದಾಗಿ ಈ ಭಾಗದ ಪರಿಶುದ್ಧ ವಾತಾವರಣ ಕಲುಷಿತಗೊಂಡಿದೆ. ಇದರಿಂದ ಬಹಳಷ್ಟು ಮಂದಿಗೆ ವಿವಿಧ ರೋಗಗಳು ತಗುಲಿದೆ ಎಂದು ಗ್ರಾಮಸ್ಥರು ವ್ಯಕ್ತಿಯ ವಿರುದ್ಧ ಪಂಚಾಯಿತಿಗೆ ದೂರು ನೀಡಿದ್ದಾರೆ. ಮುಂದಿನ ಕ್ರಮವಾಗಿ ಜಿಲ್ಲಾಧಿಕಾರಿಗೆ ಈ ವಿಚಾರವನ್ನು ಮನದಟ್ಟು ಮಾಡಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಒಂದೆಡೆ ಗೋಣಿಕೊಪ್ಪಲು ಪಂಚಾಯಿತಿ ಕಸ ತೆಗೆದು ಸ್ವಚ್ಛ ನಗರ ಮಾಡಲು ಹೊರಟಿದೆ. ಆದರೆ ತನ್ನ ಪಟ್ಟಣದ ಮಡಿಲಿನಲ್ಲಿದ್ದ ತ್ಯಾಜ್ಯಗಳನ್ನೆಲ್ಲಾ ಮತ್ತೊಂದು ಪಂಚಾಯಿತಿಯ ಅಂಗಳಕ್ಕೆ ಹಾಕಿ ಮತ್ತಷ್ಟು ಸಮಸ್ಯೆಗಳು ಉದ್ಭವಿಸಲು ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
-ಚಿತ್ರ ವರದಿ: ಎನ್.ಎನ್ ದಿನೇಶ್