ಮಡಿಕೇರಿ, ನ. 16: ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಇಂದು ಇಲ್ಲಿನ ಬಾಲಭವನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೃತಕ ಕಾಲು ಜೋಡಣೆಯ ಉಚಿತ ಶಿಬಿರದಲ್ಲಿ 51 ಮಂದಿ ಫಲಾನುಭವಿ ಗಳು ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಇವರುಗಳಿಗೆ ಮುಂದಿನ ಡಿಸೆಂಬರ್‍ನಲ್ಲಿ ಕೃತಕ ಕಾಲುಗಳನ್ನು ಜೋಡಿಸಲಾಗುವದು ಎಂದು ರೆಡ್‍ಕ್ರಾಸ್ ಸಂಸ್ಥೆ ಅಧ್ಯಕ್ಷ ಬಿ.ಕೆ. ರವೀಂದ್ರ ರೈ ಭರವಸೆ ನೀಡಿದ್ದಾರೆ.

ಇಂದಿನ ಶಿಬಿರದಲ್ಲಿ ಕೊಡಗು ಜಿಲ್ಲೆಯ ವಿವಿಧೆಡೆಗಳ ಫಲಾನುಭವಿ ಗಳೊಂದಿಗೆ; ಕುಂದಾಪುರ, ಟಿ.ನರಸೀಪುರ, ಮೈಸೂರು, ಹಾಸನ ಮುಂತಾದೆಡೆಗಳಿಂದ ವಿವಿಧ ಸಂದರ್ಭ ಗಳಲ್ಲಿ ಕಾಲುಗಳನ್ನು ಕಳೆದುಕೊಂಡವರು ಆಗಮಿಸಿ, ಅಳತೆಗಳನ್ನು ನೀಡಿ ಶಿಬಿರದ ಪ್ರಯೋಜನ ಪಡೆದುಕೊಂಡರು.

ಈ ಸಂದರ್ಭ ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಎಂ.ಆರ್. ಜಗದೀಶ್, ಚೆನ್ನೈನ ಫ್ರೀಡಂ ಸಂಸ್ಥೆಯ ರಿಶಿಕುಮಾರ್, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಆರ್. ಸಂಪತ್ ಕುಮಾರ್, ಸ್ವಾಮಿ ವಿವೇಕಾನಂದ, ಯೂತ್ ಮೂವ್‍ಮೆಂಟ್‍ನ ಜಯಕುಮಾರ್ ಮೊದಲಾದವರು ಪಾಲ್ಗೊಂಡು ಶಿಬಿರದ ಯಶಸ್ಸಿಗೆ ಸಹಕಾರ ನೀಡಿದರು.

ಫಲಾನುಭವಿಗಳು : ಇಂದಿನ ಕೃತಕ ಕಾಲು ಜೋಡಣಾ ಶಿಬಿರದಲ್ಲಿ ಮಡಿಕೇರಿ ತಾಲೂಕಿನಿಂದ 10, ವೀರಾಜಪೇಟೆ ತಾಲೂಕು 11, ಸೋಮವಾರಪೇಟೆ ತಾಲೂಕು 13, ನಂಜನಗೂಡು 10, ಟಿ.ನರಸೀಪುರ 4, ಪಿರಿಯಾಪಟ್ಟಣ 4, ಹಾಸನ 1, ಕುಂದಾಪುರ 1 ಸೇರಿದಂತೆ ಒಟ್ಟು 51 ಮಂದಿ ಫಲಾನುಭವಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಶಿಬಿರದ ಆಯೋಜಕರು ಮಾಹಿತಿ ನೀಡಿದರು.