ಕೂಡಿಗೆ, ನ. 16: ಹಾರಂಗಿ ಅಣೆಕಟ್ಟೆ ಅಭಿವೃದ್ಧಿಗೆ ನೀರಾವರಿ ಇಲಾಖೆಯ ವತಿಯಿಂದ ರೂ.15 ಲಕ್ಷ ಬಿಡುಗಡೆಯಾಗಿದ್ದು, ಈಗಾಗಲೇ ಹಾರಂಗಿ ಅಣೆಕಟ್ಟೆಯ ಮೇಲ್ಭಾಗಕ್ಕೆ, ಕಚೇರಿಯ ಮುಂಭಾಗ, ರಸ್ತೆಯ ಬದಿಗಳಲ್ಲಿ ಹಾಗೂ ಮುಂಭಾಗದಲ್ಲಿ ವಿದ್ಯುದೀಕರಣ ಮತ್ತು ರಕ್ಷಣಾತ್ಮಕ ವಿದ್ಯುತ್ ಕಂಬಗಳ ಅಳವಡಿಕೆ ಕಾಮಗಾರಿ ನಡೆಯುತ್ತಿದೆ.
ಕಳೆದ ನಾಲ್ಕು ವರ್ಷಗಳಿಂದ ಅಣೆಕಟ್ಟೆಯ ಮೇಲ್ಭಾಗ ಹಾಗೂ ರಸ್ತೆಯ ಬದಿಯಲ್ಲಿ ಅಳವಡಿಸಿದ್ದ ಕೆಲವು ದೀಪಗಳು ಹಾನಿಯಾಗಿದ್ದರೂ ಅವುಗಳ ದುರಸ್ತಿ ಕಾರ್ಯ ನಡೆದಿರಲಿಲ್ಲ. ಹಾಗೂ ಅತಿಯಾದ ಮಳೆ ಗಾಳಿಗೆ ಕಬ್ಬಿಣದ ವಿದ್ಯುತ್ ಕಂಬಗಳು ಬಾಗಿಕೊಂಡು, ಇನ್ನೂ ಕೆಲವು ಮುರಿದು ಹೋಗಿದ್ದವು. ಇದೀಗ ಹೊಸ ವಿದ್ಯುತ್ ದೀಪಗಳ ಅಳವಡಿಕೆ ಮತ್ತು ಹಾನಿಯಾಗಿರುವ ವಿದ್ಯುತ್ ಕಂಬಳ ಸರಿಪಡಿಸುವಿಕೆ, ಬಲ್ಬ್‍ಗಳ ಅಳವಡಿಕೆ ಕಾಮಗಾರಿಗೆ ನೀರಾವರಿ ಇಲಾಖೆಯ ವತಿಯಿಂದ ರೂ. 15 ಲಕ್ಷ ಬಿಡುಗಡೆಯಾಗಿದೆ.
ಅಣೆಕಟ್ಟೆಯ ಮುಂಭಾಗದಲ್ಲಿ ಹಾಗೂ ಒಳಗೆ ಹೋಗುವ ರಸ್ತೆಯ ಬದಿಗಳಲ್ಲಿ ವಿದ್ಯುತ್ ಕಂಬಗಳ ತಳಭಾಗಕ್ಕೆ ಕಾಂಕ್ರಿಟ್ ಹಾಕಿ ಕಂಬಗಳು ಬೀಳದಂತೆ ರಕ್ಷಣೆ ಮಾಡಲಾಗುತ್ತಿದೆ. ಮುಖ್ಯದ್ವಾರದಲ್ಲಿ ಅತ್ಯಾಕರ್ಷಕ ವಿದ್ಯುತ್ ದೀಪಗಳು, ಅಣೆಕಟ್ಟೆಯ ಮೇಲ್ಭಾಗದಲ್ಲಿ ಒಂದು ಬದಿಯಿಂದ ಮತ್ತೊಂದು ಬದಿಯವರೆಗೂ, ಸಂಗೀತ ಕಾರಂಜಿ ರಸ್ತೆಯುದ್ದಕ್ಕೂ ಹಾಗೂ ಅಣೆಕಟ್ಟೆಯ ನಾಲ್ಕು ಕ್ರಸ್ಟ್‍ಗೇಟ್‍ಗಳ ಎಡ ಮತ್ತು ಬಲ ಭಾಗಗಳಲ್ಲಿಯೂ ಅತ್ಯಾಕರ್ಷಕ ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತಿದೆ. -ಕೆ.ಕೆ. ನಾಗರಾಜಶೆಟ್ಟಿ