ಗುಡ್ಡೆಹೊಸೂರು, ನ. 14: 12ನೇ ವರ್ಷದ ಕರ್ನಾಟಕ ಒಲಿಂಪಿಕ್ ಪಂದ್ಯಾಟದಲ್ಲಿ ಕೊಡಗು ತಂಡ ಪ್ರಥಮ ಸ್ಥಾನಗಳಿಸಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿ ನಡೆದ ಪಂದ್ಯಾಟದಲ್ಲಿ ಕೊಡಗು ಜಿಲ್ಲೆ ಪರವಾಗಿ ಕುಶಾಲನಗರದ ಫಾತಿಮಾ ಪ್ರೌಢಶಾಲೆಯ ತಂಡ ಭಾಗವಹಿಸಿ ಸೆಟ್ಟೋ ಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನಗಳಿಸಿ ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ರಾಜ್ಯದ ಒಟ್ಟು 8 ತಂಡಗಳು ಭಾಗವಹಿಸಿದ್ದ ಪಂದ್ಯದಲ್ಲಿ ಅಂತಿಮ ಪಂದ್ಯಾಟ ಚಾಮರಾಜನಗರ ಮತ್ತು ಕೊಡಗು ತಂಡಗಳ ನಡುವೆ ನಡೆಯಿತು. ಈ ಪಂದ್ಯಾಟದಲ್ಲಿ 32-16 ಅಂಕ ಪಡೆದು ಜಿಲ್ಲೆಯ ತಂಡ ಪ್ರಥಮ ಸ್ಥಾನ ಪಡೆಯಿತು. ಫಾತಿಮಾ ಶಾಲೆಯ ಆಟಗಾರ ಶಾಹಿಲ್ ಮತ್ತು ಅರುಣ್ ಕರ್ನಾಟಕ ತಂಡಕ್ಕೆ ಆಯ್ಕೆಯಾದರು. ಜಿಲ್ಲೆಯ ತಂಡದ ತರಬೇತುದಾರರಾಗಿ ಗುಡ್ಡೆಹೊಸೂರಿನ ಜಾನ್ಸನ್ ಕಾರ್ಯನಿರ್ವಹಿಸುತ್ತಿದ್ದಾರೆ.