ಮಡಿಕೇರಿ, ನ. 15: ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದ ಕೆ.ಎ. ಹ್ಯಾರಿಸ್ ಅವರನ್ನು ದಿಢೀರ್ ಬದಲಾವಣೆ ಮಾಡಿ, ಸುಂಟಿಕೊಪ್ಪ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಹಾಗೂ ಮೈಸೂರು ವಲಯ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಸಂಯೋಜಕ ಎಂ.ಎ ಉಸ್ಮಾನ್ ಅವರನ್ನು ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರನ್ನಾಗಿ ಅಖಿಲ ಭಾರತ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾಗಿರುವ ನದೀಮ್ ಜಾವೇದ್ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.ನಿಕಟಪೂರ್ವ ಅಧ್ಯಕ್ಷ ಎ.ಕೆ. ಹ್ಯಾರಿಸ್ ಅವರನ್ನು ಕಳೆದ ಐದು ತಿಂಗಳ ಹಿಂದೆಯಷ್ಟೇ ಜಿಲ್ಲಾ ಅಲ್ಪಸಂಖ್ಯಾತ ಅಧ್ಯಕ್ಷರನ್ನಾಗಿ ಕೆ.ಪಿ.ಸಿ.ಸಿ. ಆಯ್ಕೆ ಮಾಡಿ ಆದೇಶ ಹೊರಡಿಸಿತ್ತು.ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾಗಿರುವ ಕೆ.ಎ. ಯಾಕೂಬ್ ಅವರು ಈ ಹಿಂದೆ ಜಿಲ್ಲಾ ಅಲ್ಪಸಂಖ್ಯಾತ ಅಧ್ಯಕ್ಷರಾಗಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸಿದ್ದರು.ಯಾಕೂಬ್ ಅವರಿಗೆ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನ ದೊರೆತ ಒಂದೆರಡು ತಿಂಗಳುಗಳಲ್ಲಿ ಎ.ಕೆ. ಹ್ಯಾರಿಸ್ ಅವರಿಗೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು.

ಮುಖಂಡರಲ್ಲಿ ಅಸಮಾಧಾನ

ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಎ. ಹ್ಯಾರಿಸ್ ಅವರನ್ನು ದಿಢೀರ್ ಬದಲಾವಣೆ ಮಾಡಿ, ಎಂ.ಎ. ಉಸ್ಮಾನ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಿದ್ದಕ್ಕೆ ಜಿಲ್ಲೆಯ ಕೆಲ ಅಲ್ಪಸಂಖ್ಯಾತ ಮುಖಂಡರು ಅಸಮಾಧಾನ ಹೊರ ಹಾಕಿದ್ದಾರೆ.

(ಮೊದಲ ಪುಟದಿಂದ) ಹ್ಯಾರಿಸ್ ಕಳೆದ ಐದು ತಿಂಗಳಲ್ಲಿ ಜಿಲ್ಲೆಯ ಬಹುತೇಕ ಕಡೆ ವಲಯವಾರು ಅಲ್ಪಸಂಖ್ಯಾತ ಅಧ್ಯಕ್ಷರನ್ನು, ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು, ಆದರೆ ಇದೀಗ ಏಕಾಏಕಿ ಅವರನ್ನು ಬದಲಾವಣೆ ಮಾಡಿದಕ್ಕೆ ಜಿಲ್ಲೆಯ ಅಲ್ಪಸಂಖ್ಯಾತ ಕೆಲ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಿ.ಸಿ.ಸಿ ಅಧ್ಯಕ್ಷರಿಗಿಲ್ಲ ಮಾಹಿತಿ

ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ದಿಢೀರ್ ಬದಲಾವಣೆಯ ಕುರಿತು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಅವರಿಗೆ ಅಧಿಕೃತ ಮಾಹಿತಿ ಲಭಿಸಿಲ್ಲ.

ಈ ವಿಷಯ ಕುರಿತು ಜನಮಿತ್ರ ಮಂಜುನಾಥ್ ಅವರನ್ನು ಸಂಪರ್ಕಿಸಿದಾಗ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಬದಲಾವಣೆ ಕುರಿತು ನನಗೆ ಇದುವರೆಗೆ ಯಾವದೇ ಲಿಖಿತ ಆದೇಶ ಬಂದಿಲ್ಲ, ವ್ಯಾಟ್ಸ್ ಅಪ್‍ಗಳಲ್ಲಿ ನೇಮಕಗೊಂಡ ಎಐಸಿಸಿ ಹಾಗೂ ಕೆ.ಪಿ.ಸಿ.ಸಿ ಆದೇಶ ಪತ್ರವನ್ನು ನೋಡಿ ನನಗೆ ವಿಷಯ ಗೊತ್ತಾಗಿದೆ. ಹೈಕಮಾಂಡ್ ಆದೇಶವನ್ನು ಪಾಲನೆ ಮಾಡಬೇಕಾಗುತ್ತದೆ ಎಂದು ಕೆ.ಕೆ. ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ.

ಎ.ಕೆ. ಹ್ಯಾರಿಸ್ ರಾಜ್ಯ ಘಟಕದ ಉಪಾಧ್ಯಕ್ಷ

ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದ, ಎ.ಕೆ. ಹ್ಯಾರಿಸ್ ಅವರಿಗೆ, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿ ಕೆ.ಪಿ.ಸಿ.ಸಿ ಆದೇಶ ಹೊರಡಿಸಿದ್ದಾರೆ.

- ಕೆ.ಎಂ ಇಸ್ಮಾಯಿಲ್ ಕಂಡಕರೆ