ಶ್ರೀಮಂಗಲ, ನ. 15: ಕೊಡಗಿನಲ್ಲಿ ಕೊಡವರ ಮೂಲ ಅಸ್ತಿತ್ವವನ್ನು ಅಳಿಸಿ ಹಾಕುವ ಹುನ್ನಾರ ನಡೆಯುತ್ತಿದ್ದು, ಸತ್ಯವನ್ನೇ ಸುಳ್ಳಾಗಿ, ಸುಳ್ಳನ್ನು ಸತ್ಯಾವಾಗಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಇತ್ತೀಚೆಗೆ ಹುಟ್ಟಿಕೊಂಡಿರುವ ಕೆಲವು ನಕಲಿ ಇತಿಹಾಸ ಬರಹಗಾರರು ಬೆಂಬಲಕ್ಕೆ ನಿಂತಿದ್ದಾರೆ ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೇಕ್‍ಮಾಡ ರಾಜೀವ್ ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪೊನ್ನಂಪೇಟೆಯಲ್ಲಿ ಯುಕೊ ಸಂಘಟನೆಯ ಆಶ್ರಯದಲ್ಲಿ ಕೊಡವ ಮೂಲ ಅಸ್ತಿತ್ವ ಅರಿವು ಅಭಿಯಾನದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ತಮ್ಮ ಏಳಿಗೆಗೆ ಕೊಡವರ ಸರ್ವ ಬೆಂಬಲವನ್ನು ಪಡೆದುಕೊಂಡು ಉನ್ನತ ಸ್ಥಾನಮಾನಕ್ಕೆ ಏರಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡ ಕೆಲವು ಮುಖಂಡರು ತೆರೆಯ ಮರೆಯಲ್ಲಿ ಕೊಡವರ ವಿರುದ್ಧ ಜನಾಂಗೀಯ ಪಿತೂರಿಯನ್ನು ನಡೆಸುವ ಕಾಯಕಕ್ಕೆ ಕೈಹಾಕಿದ್ದಾರೆ. ಇಂತವರಿಗೆ ತಕ್ಕ ಪಾಠ ಕಲಿಸುವ ಕೆಲಸ ನಮ್ಮ ಜನಾಂಗವು ಒಗ್ಗಟ್ಟಿನಿಂದ ಮಾಡಬೇಕಾಗುತ್ತದೆ. ಕೊಡವ ಎನ್ನುವ ಮೂಲ ಸಂಸ್ಕøತಿಯ ಪರಿಮಳವನ್ನು ಬಳಸಿಕೊಂಡು ಮೆರೆದಾಡುವ ಕೆಲವರಿಗೆ ಕೊಡವ ಜನಾಂಗವನ್ನು ಮಾತ್ರ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ರಾಜೀವ್ ಬೋಪಯ್ಯ ಮಾರ್ಮಿಕವಾಗಿ ನುಡಿದರು.

ಅಧ್ಯಕ್ಷತೆ ವಹಿಸಿದ್ದ ಯುಕೊ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಫೆಬ್ರವರಿ 15, 1968ರಲ್ಲಿ ಹೆಚ್.ಎ. ಮಾಂಗಲ್ಸ್ ಎಂಬ ಆಂಗ್ಲ ಸಂಶೋಧಕರು ಮಡಿಕೇರಿಯಿಂದ 10 ಮೈಲು ದೂರದಲ್ಲಿ ಉತ್ಖನನ ನಡೆಸಿದಾಗ ಸುಮಾರು 8 ರಿಂದ 10 ಸಾವಿರ ವರ್ಷಗಳಷ್ಟು ಹಳೆಯದಾದ ಕಲ್ಲಿನ ಕೊಡಲಿಯೊಂದು ಸಿಕ್ಕಿದ್ದು, ಈ ವಿಷಯವನ್ನು ಜೆ. ಕಾಗಿಂಗ್ ಬ್ರೌನ್ ಎಂಬವರು ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಜರ್ನಲ್‍ನಲ್ಲಿ ಪ್ರಕಟಪಡಿಸಿರುತ್ತಾರೆ. ಇದು ಶಿಲಾಯುಗದಲ್ಲಿ ಈ ನೆಲದಲ್ಲಿ ಮಾನವನು ನೆಲೆಸಿದ್ದ ಎಂಬದಕ್ಕೆ ಸಾಕ್ಷಿಯಾಗಿದೆ. ಈ ಮಣ್ಣಿನಲ್ಲಿ ಅನಾಧಿಕಾಲದಿಂದಲೇ ಬದುಕಿಬಂದಂತಹ ಮಾನವ ಕುಲವೇ ಈ ಕೊಡವ ಜನಾಂಗ ಎಂಬದಕ್ಕೆ ಅನೇಕ ಪುರಾವೆಗಳಿವೆ ಎಂದು ಪ್ರತಿಪಾದಿಸಿದರು.

ಕೆಲವು ವರ್ಷಗಳಿಂದ ಕೊಡವರ ಮೂಲ ಸಂಸ್ಕøತಿ ಹಾಗೂ ಕೊಡವರ ಸಾಂಪ್ರದಾಯಿಕ ಉಡುಗೆಯನ್ನು ದಿಢೀರನೆ ಬಳಸಲು ತೊಡಗಿಕೊಂಡ ಕೆಲವರು ಇದೀಗ ಧಾರ್ಮಿಕ ಹಾಗೂ ಸಾಂಪ್ರದಾಯಿಕವಾದಂತಹ ಕೆಲವೊಂದು ಆಚರಣೆಗಳಲ್ಲಿಯೂ ಸಹ ಕೊಡವರ ಹೆಸರನ್ನೇ ಸಹಿಸಿಕೊಳ್ಳದಂತೆ ಮೊಂಡುತನವನ್ನು ಪ್ರದರ್ಶಿಸುತ್ತಿರುವದು ಕಂಡುಬರುತ್ತಿದೆ. ಇಂತವರು ಕಳೆದ ಕೆಲವು ವರ್ಷಗಳಲ್ಲಿ ತಮ್ಮ ಜನಾಂಗಕ್ಕೆ ಪ್ರಾಯೋಗಿಕವಾಗಿ ವೃಸ್ತ್ರವಿನ್ಯಾಸವನ್ನು ಮಾಡಿಸಿ ಅದುವೇ ತಮ್ಮ ಅಧಿಕೃತವಾದ ಸಾಂಸ್ಕøತಿಕ ಉಡುಗೆ ಎಂದು ಸಹ ಘೋಷಿಸಿಕೊಂಡಿದ್ದರು. ಅದೇ ವಿನೂತನ ವಿನ್ಯಾಸದ ಉಡುಗೆಯಲ್ಲಿ ಕಾರ್ಯಕ್ರಮವನ್ನು ನಡೆಸಿ ಮೆರವಣಿಗೆಯನ್ನು ಸಹ ನಡೆಸಿದ್ದರು. ಇದೀಗ ಕೊಡವರ ಸಾಂಪ್ರದಾಯಿಕ ಹಾಗೂ ಪ್ರಶ್ನಾತೀತ ಸಂಪ್ರದಾಯವನ್ನು ಹಾಗೂ ಉಡುಗೆ ತೊಡಗೆಗಳನ್ನು ಅಣಕಿಸಲು ಪ್ರಯತ್ನಿಸುವ ಬದಲಿಗೆ ತಮ್ಮ ಸ್ವಂತಿಕೆಯ ಬಗ್ಗೆ ಆತ್ಮವಿಮರ್ಶೆ ನಡೆಸಿಕೊಳ್ಳುವದೊಳಿತು ಎಂದು ಮಂಜು ಚಿಣ್ಣಪ್ಪ ಕಿಡಿಕಾರಿದರು. ಕಾರ್ಯಕ್ರಮದಲ್ಲಿ ಮೊದಚೊಪ್ಪೆಯ ಬಹುಮಾನಗಳಾದ ಜೋಮಾಲೆ, ಪತ್ತಾಕ್, ಪೀಜೆಕತ್ತಿ, 4 ಗ್ರಾಂ ಹಾಗೂ 2 ಗ್ರಾಂ ಚಿನ್ನದ ನಾಣ್ಯಗಳನ್ನು ಕ್ರಮವಾಗಿ ಮಾಚೇಟ್ಟಿರ ಕುಶಾಲಪ್ಪ, ಕಾಡ್ಯಮಾಡ ರೀತಾ ಸುಮನ್, ಮಲ್ಚೀರ ಸೋಮಯ್ಯ, ಚೇಂದಂಡ ಪೊನ್ನಪ್ಪ ಹಾಗೂ ನೆಲ್ಲಮಕ್ಕಡ ಧಾನಿಕ ದೇಚಮ್ಮ ಅವರುಗಳಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಯುಕೊ ಸಂಘಟನೆಯ ಕಳ್ಳಿಚಂಡ ರಾಬೀನ್ ಸುಬ್ಬಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಮಾದಯ್ಯ, ಮಚ್ಚಮಾಡ ರಮೇಶ್, ಕುಪ್ಪಂಡ ತೇಜಶ್ವಿನಿ ಚಂಗಪ್ಪ, ಕಳ್ಳಿಚಂಡ ದೀನ ಉತ್ತಪ್ಪ, ತಡಿಯಂಗಡ ಗಾನ ಸೋಮಣ್ಣ, ತೀತಿಮಾಡ ಬೋಸ್, ಪುಟ್ಟಂಗಡ ಉತ್ತಪ್ಪ, ಕೋಟ್ರಂಗಡ ಬಿಪಿನ್ ಬಿದ್ದಪ್ಪ, ಗುಡಿಯಂಗಡ ಲಿಖಿನ್ ಬೋಪಣ್ಣ ಹಾಗೂ ಇತರರು ಹಾಜರಿದ್ದರು.