ಕೂಡಿಗೆ, ನ. 13: ಕೂಡಿಗೆ ಯುವಕ ಸಂಘದ ವತಿಯಿಂದ ಕೂಡಿಗೆಯಲ್ಲಿ ವಾಲಿಬಾಲ್ ಪಂದ್ಯಾಟ ನಡೆಯಿತು. ಪಂದ್ಯಾಟಕ್ಕೆ ಕೂಡಿಗೆ ಗ್ರಾ.ಪಂ. ಸದಸ್ಯ ರಾಮಚಂದ್ರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದಲ್ಲಿ ಯುವಕರು ಕ್ರೀಡಾಕೂಟಗಳನ್ನು ನಡೆಸುವದರಿಂದ ಸಾಮರಸ್ಯ ಮನೋಭಾವ ಬೆಳೆಯುತ್ತದೆ. ಕ್ರೀಡಾಕೂಟಗಳಿಂದ ಒಂದೆಡೆ ಸೇರುವದರ ಮೂಲಕ ಸೇವೆ, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಕ್ರೀಡಾಕೂಟದಲ್ಲಿ ಸುಮಾರು 10 ತಂಡಗಳು ಭಾಗವಹಿಸಿದ್ದವು. ಪಂದ್ಯಾಟದಲ್ಲಿ ಕೂಡಿಗೆಯ ಫ್ರೆಂಡ್ಸ್ ಕ್ಲಬ್ ತಂಡ ಪ್ರಥಮ ಸ್ಥಾನ, ಕೂಡುಮಂಗಳೂರಿನ ಮಂಜು ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನ ಹಾಗೂ ಹುದುಗೂರು ಕೆ.ವೈ.ಎಸ್. ತಂಡ ತೃತೀಯ ಸ್ಥಾನ ಪಡೆದುಕೊಂಡವು.

ವಿಜೇತ ತಂಡಗಳಿಗೆ ಕೂಡಿಗೆ ಪಿ.ಯು. ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ ಬಹುಮಾನಗಳನ್ನು ವಿತರಿಸಿದರು. ಈ ಸಂದರ್ಭ ಕೂಡುಮಂಗಳೂರು ಗ್ರಾ.ಪಂ. ಸದಸ್ಯ ರಮೇಶ್, ವಾಲಿಬಾಲ್ ರಾಜ್ಯ ಮಟ್ಟದ ಕ್ರೀಡಾಪಟು ಭೀಮಯ್ಯ, ಪ್ರಮುಖರಾದ ರಾಜು, ಮಂಜುನಾಥ್, ಶ್ರೀನಿವಾಸ್, ಹರೀಶ್, ಯುವಕ ಸಂಘದ ಪದಾಧಿಕಾರಿಗಳಾದ ಶರತ್, ಸುರೇಶ್, ಸಚಿನ್, ಸಂತು ಸೇರಿದಂತೆ ಮತ್ತಿತರರು ಇದ್ದರು.