ಕೂಡಿಗೆ, ನ. 13: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಅಕ್ಷರ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯಲ್ಲಿ ಜಿಲ್ಲೆಯ ಕ್ಲಸ್ಟರ್ ವ್ಯಾಪ್ತಿಯ ಸಿ.ಆರ್.ಪಿ., ಬಿ.ಆರ್.ಪಿ., ಸಂಪನ್ಮೂಲ ಶಿಕ್ಷಕರಿಗೆ ಗಣಿತ ಕಲಿಕಾ ಆಂದೋಲನ ಏರ್ಪಡಿಸಲಾಗಿತ್ತು.

ಗಣಿತ ಕಲಿಕಾ ಆಂದೋಲನದ ರಾಜ್ಯ ಸಂಯೋಜಕ ಹೆಚ್.ಬಿ. ಕಣ್ಣಿ ಮಾತನಾಡಿ, ಪ್ರಾಥಮಿಕ ಶಾಲಾ ಮಕ್ಕಳಿಗೆ ಗಣಿತ ಕಿಟ್ ಮೂಲಕ ಗಣಿತವನ್ನು ಸಂತಸ ಕಲಿಕೆ ಮತ್ತು ಚಟುವಟಿಕೆ ಮೂಲಕ ಸರಳವಾಗಿ ಕಲಿಸಲು ಈ ತರಬೇತಿ ಕಾರ್ಯಾಗಾರ ಸಹಕಾರಿಯಾಗಿದೆ. ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಗಣಿತ ಕಿಟ್ ಅನ್ನು ಸೇತು-ಬಂಧ ಕಾರ್ಯಕ್ರಮದಲ್ಲಿ ಬಳಸಿಕೊಂಡು ಮಕ್ಕಳಿಗೆ ಗಣಿತವನ್ನು ಸುಲಭವಾಗಿ ಕಲಿಸಬಹುದು ಎಂದರು.

ಶಾಲೆಗಳಲ್ಲಿ ಬಹುತೇಕ ಮಕ್ಕಳು ಗಣಿತ ವಿಷಯವೆಂದರೆ ಭಯಪಡುವರು, ಗಣಿತ ಕಲಿಕಾ ಆಂದೋಲನವು ಪ್ರಾಥಮಿಕ ಶಾಲೆಯ ಗಣಿತ ಶಿಕ್ಷಕರು ಪ್ರಯಾಸಪಡದೆ ತಮ್ಮ ತರಗತಿಯಲ್ಲಿ ಮಕ್ಕಳ ಸ್ನೇಹಿಯಾಗಿ ಗಣಿತ ಕಲಿಕೆ ಸಂತಸದ ಕಲಿಕೆ ಯೊಂದಿಗೆ ಮತ್ತು ಪರಿಕಲ್ಪನೆಗಳನ್ನು ಪರಿಣಾಮಕಾರಿಯಾಗಿಯೂ ಹಾಗೂ ಅರ್ಥಪೂರ್ಣವಾಗಿರುವಂತೆ ಮಾಡಲು ಅನುವು ಮಾಡಿಕೊಡುವ ಪೂರಕ ಕಾರ್ಯಕ್ರಮವಾಗಿದೆ ಎಂದರು.

ಗಣಿತ ಕಲಿಕಾ ಆಂದೋಲನದ ಕುರಿತು ಡಯಟ್‍ನ ಪದನಿಮಿತ್ತ ಉಪ ನಿರ್ದೇಶಕ (ಅಭಿವೃದ್ಧಿ) ಸಂಸ್ಥೆಯ ಪ್ರಾಂಶುಪಾಲ ಎಸ್.ಟಿ. ಜವರೇಗೌಡ ಮಾತನಾಡಿ, ಗುಣಾತ್ಮಕ ಗಣಿತ ಶಿಕ್ಷಣ ಪಡೆಯುವದು ಪ್ರತಿ ಮಗುವಿನ ಹಕ್ಕು. ಮಕ್ಕಳ ಸ್ನೇಹಿ ಗಣಿತದ ಕಲಿಕೋಪಕರಣಗಳನ್ನು ಒಳಗೊಂಡ ಕಿಟ್ ಅನ್ನು ಶಾಲೆಗೆ ಒದಗಿಸಲಾಗುವದು. ಇದರಿಂದ ಮಕ್ಕಳ ದಿನನಿತ್ಯದ ಗಣಿತ ಸನ್ನಿವೇಶಗಳನ್ನು ಜೋಡಿಸಲು, ಗಣಿತದ ವಾಸ್ತವಿಕ ಜೀವನಕ್ಕೆ ಹೊಂದಿಸಲು ಗಣಿತದ ಪರಿಕಲ್ಪನಾ ಕಾರ್ಡುಗಳು ಸಹಕಾರಿಯಾಗಲಿವೆ ಎಂದರು. ಗಣಿತ ಕಬ್ಬಿಣದ ಕಡಲೆಯಲ್ಲ. ನಿರಂತರ ಅಭ್ಯಾಸದಿಂದ ಗಣಿತವನ್ನು ಮಾಡುತ್ತಾ ಹೋದರೆ ಗಣಿತ ಕಲಿಕೆಯು ಸುಲಭ ಸಾಧ್ಯವಾಗುತ್ತದೆ ಎಂದು ಪ್ರಾಂಶುಪಾಲರು ತಿಳಿಸಿದರು.

ತರಬೇತಿ ಕಾರ್ಯಾಗಾರದ ಜಿಲ್ಲಾ ನೋಡಲ್ ಅಧಿಕಾರಿ, ಡಯಟ್‍ನ ಉಪನ್ಯಾಸಕ ಯು. ಸಿದ್ದೇಶಿ, ಗಣಿತ ಬೋಧನೆಗೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮತ್ತು ರಾಜ್ಯ ಪಠ್ಯಕ್ರಮ ಚೌಕಟ್ಟು ಡಯಟ್‍ನಲ್ಲಿ ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ನಂತರ ತಮ್ಮ ಕ್ಲಸ್ಟರ್ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ತರಬೇತಿ ನೀಡಲಿ ದ್ದಾರೆ. ಬ್ಲಾಕ್ ಹಂತದಲ್ಲಿ ತರಬೇತಿ ಪಡೆದ ಎಲ್ಲಾ ಶಾಲಾ ಶಿಕ್ಷಕರು ತಮ್ಮ ಶಾಲೆಯ ಮಕ್ಕಳಿಗೆ ಗಣಿತವನ್ನು ಸುಲಭವಾಗಿ ಕಲಿಸಲಿದ್ದಾರೆ ಎಂದರು.

ತರಬೇತಿ ಕಾರ್ಯಾಗಾರದಲ್ಲಿ ತಾಲೂಕು ಸಂಯೋಜಕ ಹೆಚ್.ಸಿ. ಗೋವಿಂದರಾಜು, ಕುಮಾರಸ್ವಾಮಿ ಹಾಜರಿದ್ದರು. ಗಣಿತ ಕಿಟ್‍ನಲ್ಲಿ ಚೌಕಳಿ ಬಿಲ್ಲೆಗಳು, ಸಂಖ್ಯಾರೇಖೆ ಮತ್ತಿತರ ಆಟಿಕೆಗಳ ಮೂಲಕ ಮಕ್ಕಳಿಗೆ ಗಣಿತವನ್ನು ಆಕರ್ಷಕವಾಗಿ ಮತ್ತು ಸುಲಭವಾಗಿ ಹೇಗೆ ಕಲಿಸಬಹುದು ಎಂಬ ಕುರಿತು ಪ್ರಾತ್ಯಕ್ಷಿಕೆ ಮೂಲಕ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು.

ತರಬೇತಿಯಲ್ಲಿ ಗಣಿತದ ಮೂಲ ಪರಿಕಲ್ಪನೆ ಮತ್ತು ಮೂಲ ಕ್ರಿಯೆಗಳು, ಸಂಖ್ಯೆಗಳು, ಅಂಕಿ ಅಂಶಗಳು ಮುಂತಾದ ಗಣಿತ ವಿಷಯಗಳ ಕುರಿತು ಚಟುವಟಿಕೆ ಮೂಲಕ ತರಬೇತಿ ನೀಡಲಾಯಿತು. ಗಣಿತದ ಪರಿಕಲ್ಪನೆಗಳು ಪ್ರಸ್ತುತ 4 ಮತ್ತು 5 ನೇ ತರಗತಿಗೆ ‘ಆಡಿ ಕಲಿ ಮಾಡಿ ತಿಳಿ’ ಎಂಬ ಧ್ಯೇಯದೊಂದಿಗೆ 17 ಪರಿಕಲ್ಪನೆಯುಳ್ಳ ರೂಪಿಸಿರುವ ಪ್ರಾಥಮಿಕ ಶಾಲಾ ಗಣಿತ ಪಠ್ಯಕ್ರಮ ದೊಡನೆ ಗಣಿತಾ ಕಲಿಕಾ ವಿಧಾನ ಮತ್ತು ತಂತ್ರಗಳ ಬಗ್ಗೆ ತರಬೇತಿಯಲ್ಲಿ ತಿಳಿಸಲಾಯಿತು. ಈ ಸಂದರ್ಭ ಕೂಡಿಗೆ ಡಯಟ್ ಪ್ರಾಂಶುಪಾಲ ಶಿವಮೂರ್ತಿ, ಪ್ರಧಾನ ಉಪನ್ಯಾಸಕ ರಾದ ಕೆ.ವಿ. ಸುರೇಶ್, ಕುಮಾರ್, ಮಲ್ಲೇಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.