ಮಡಿಕೇರಿ, ನ.13: ಕ್ರೀಡಾ ಕಲಿಗಳ ನಾಡು ಎಂದೇ ಖ್ಯಾತಿ ಗಳಿಸಿರುವ ಕೊಡಗು ಜಿಲ್ಲೆಯ ಕೇಂದ್ರ ಸ್ಥಾನ ಮಡಿಕೇರಿಯಲ್ಲಿರುವ ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಹೆಸರಿನ ಜಿಲ್ಲಾ ಕ್ರೀಡಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ ಕ್ರೀಡಾಪಟುಗಳಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ. ಕೋಟಿ ಕೋಟಿ ಹಣ ಖರ್ಚು ಮಾಡಿ ಕಟ್ಟಿದ ಕಾಂಕ್ರಿಟ್ ಕಟ್ಟಡಗಳು ಹಲವು ಸಂಶಯಗಳನ್ನು ಹುಟ್ಟು ಹಾಕಿದ್ದು, ಜಿಲ್ಲಾಡಳಿತದ ನಿರ್ಲಕ್ಷ್ಯದ ಬಗ್ಗೆ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿದ ಎಂಎಲ್‍ಸಿ ವೀಣಾ ಅಚ್ಚಯ್ಯ ಅವರು ಸರಕಾರದ ಮಟ್ಟದಲ್ಲಿ ವ್ಯವಹರಿಸುವದಾಗಿ ಹೇಳಿದರು.

ಸ್ಕ್ವಾಷ್ ಕೋರ್ಟ್, ಟೆನ್ನಿಸ್ ಕೋರ್ಟ್, ಈಜುಕೊಳ, ಫುಟ್ಬಾಲ್ ಮೈದಾನ, ಸ್ಕೇಟಿಂಗ್ ಮೈದಾನ ಸೇರಿದಂತೆ ಕ್ರೀಡಾಪಟುಗಳನ್ನು ಆಕರ್ಷಿಸುವ ಇನ್ನೂ ಕೆಲವು ವ್ಯವಸ್ಥೆಗಳು ಕೆಳಗಿನ ಮೈದಾನದಲ್ಲಿವೆ. ಆದರೆ ಇದರ ತುಂಬಾ ಅವ್ಯವಸ್ಥೆಗಳೇ ತುಂಬಿ ಹೋಗಿದ್ದು, ಅವೈಜ್ಞಾನಿಕ ಕಾಮಗಾರಿಗೆ ಮೂಕಸಾಕ್ಷಿಯನ್ನು ಹೇಳುತ್ತಿವೆ. ಕ್ರೀಡಾಕ್ಷೇತ್ರದ ನುರಿತ ವ್ಯಕ್ತಿಗಳಿಂದ ಸಲಹೆ ಪಡೆಯದೆ ಕಾಟಾಚಾರಕ್ಕೆ ಯೋಜನೆಯನ್ನು ಪೂರ್ಣಗೊಳಿಸಿರುವ ಎಲ್ಲಾ ಕುರುಹುಗಳು ಇಲ್ಲಿವೆ. ವರ್ಷದ ಎಂಟು ತಿಂಗಳು ಕೆಲಸವೇ ನಿರ್ವಹಿಸದ ಈಜುಕೊಳ ಇಂದಿಗೂ ಈಜುಗಾರರಿಗೆ ಅಲಭ್ಯವಾಗಿದೆ. ಕೊಳವೆ ಬಾವಿ ರಿಪೇರಿ ಎಂದು ಅಧಿಕಾರಿಗಳು ಕಾಲಹರಣ ಮಾಡುತ್ತಿ ದ್ದಾರೆ. ಒಳಾಂಗಣ ಕ್ರೀಡಾಂಗಣದ ವಿವಿಧ ವಿಭಾಗಗಳ ದುರಸ್ತಿಗಾಗಿ ಪ್ರತಿವರ್ಷ ಲಕ್ಷಾಂತರ ರೂಪಾಯಿ ಹಣವನ್ನು ಡ್ರಾ ಮಾಡಲಾಗುತ್ತಿದೆ. ಅದರಲ್ಲೂ ಈಜುಕೊಳಕ್ಕೆ ಹೆಚ್ಚಿನ ಹಣವನ್ನು ನೀರುಪಾಲು ಮಾಡಲಾ ಗುತ್ತಿದೆ ಎನ್ನುವ ಆರೋಪವಿದೆ.

ಅವೈಜ್ಞಾನಿಕ ರೂಪದ ಒಳಾಂಗಣ ವ್ಯವಸ್ಥೆಯಿಂದ ಕ್ರೀಡಾಪಟುಗಳು ನೆಮ್ಮದಿಯಿಂದ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಬಹಳ ಹಿಂದಿನಿಂದಲೂ ಕಾಡುತ್ತಲೇ ಬಂದಿದೆ. ಕ್ರೀಡಾಪಟುಗಳ ವಸ್ತ್ರ ಬದಲಾವಣೆ ಅಥವಾ ತಾವು ತಂದ ವಸ್ತುಗಳನ್ನು ಸುರಕ್ಷಿತವಾಗಿಡಲು ಯಾವದೇ ವ್ಯವಸ್ಥೆಗಳು ಒಳಾಂಗಣ ಕ್ರೀಡಾಂಗಣದಲ್ಲಿಲ್ಲ. ಸೋರುತ್ತಿರುವ ಕಟ್ಟಡದಲ್ಲಿಯೇ ಕ್ರೀಡಾಪಟುಗಳು ಕ್ರೀಡಾ ಚಟುವಟಿಕೆಯನ್ನು ನಡೆಸ ಬೇಕಾಗಿದೆ. ವಿದ್ಯುತ್ ವ್ಯತ್ಯಯವಾದರೆ ಜನರೇಟರ್ ಸೌಲಭ್ಯವೂ ಇಲ್ಲಿಲ್ಲ ಎಂದು ಕ್ರೀಡಾಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಕ್ರೀಡಾಂಗಣಕ್ಕೆ ಒಳ ಪಡುವ ಮೇಲಿನ ಮತ್ತು ಕೆಳಗಿನ ಮೈದಾನದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡುತ್ತಿರುವದರಿಂದ ಮೈದಾನಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ಕ್ರೀಡಾ ಇಲಾಖೆ ಇದಕ್ಕೆ ಅವಕಾಶ ನೀಡಬಾರದೆಂದು ಕ್ರೀಡಾಪಟುಗಳು ಒತ್ತಾಯಿಸಿದ್ದಾರೆ.

ಈ ಹಿಂದೆ ಕ್ರೀಡಾ ಸಚಿವರಾಗಿದ್ದ ಕೊಡಗಿನವರೇ ಆದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಆಸಕ್ತಿಯಿಂದ ಕೋಟಿಗಟ್ಟಲೆ ವೆಚ್ಚದಲ್ಲಿ ಮೈದಾನದಲ್ಲಿ ಹಲವು ಕಟ್ಟಡಗಳು ತಲೆ ಎತ್ತಿದವು. ಆದರೆ ಮಾಜಿ ಕ್ರೀಡಾ ಸಚಿವರ ನಿರೀಕ್ಷೆಯಂತೆ ಈ ಕಟ್ಟಡಗಳು ಮತ್ತು ಮೈದಾನ ಕ್ರೀಡಾಪಟುಗಳಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ.

ವೀಣಾಅಚ್ಚಯ್ಯ ಚರ್ಚೆ

ಜಿಲ್ಲಾ ಕ್ರೀಡಾಂಗಣ ಮತ್ತು ಒಳಾಂಗಣ ಕ್ರೀಡಾಂಗಣದ ಅವ್ಯವಸ್ಥೆ ಬಗ್ಗೆ ಕ್ರೀಡಾಭಿಮಾನಿಗಳು ದೂರಿ ಕೊಂಡ ಹಿನ್ನೆಲೆ ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೂಲಭೂತ ಸೌಲಭ್ಯದ ಕೊರತೆ ಮತ್ತು ಅವ್ಯವಸ್ಥೆಗಳ ಬಗ್ಗೆ ಕ್ರೀಡಾಭಿಮಾನಿಗಳೊಂದಿಗೆ ಚರ್ಚಿಸಿದರು.

ಈ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದ ವೀಣಾ ಅಚ್ಚಯ್ಯ ಅವರು ಕೋಟಿಗಟ್ಟಲೆ ಹಣ ಖರ್ಚು ಮಾಡಿ ಅವೈಜ್ಞಾನಿಕ ಮತ್ತು ಕಳಪೆ ಗುಣಮಟ್ಟದ ಕ್ರೀಡಾ ವಿಭಾಗಗಳ ಕಟ್ಟಡವನ್ನು ನಿರ್ಮಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ನುರಿತ ಕ್ರೀಡಾ ತಜ್ಞರೊಂದಿಗೆ ಚರ್ಚಿಸದೆ ಮತ್ತು ಸಲಹೆ ಪಡೆಯದೆ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕ್ರೀಡಾಂಗಣಗಳ ದುರಸ್ತಿ ಮತ್ತು ನಿರ್ವಹಣೆಗಾಗಿ ಪ್ರತಿವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ ಮತ್ತೆ ಮತ್ತೆ ದುರಸ್ತಿಯ ಕಾರಣಗಳು ಪುನರಾವರ್ತನೆ ಯಾಗುತ್ತಿದ್ದು, ಕ್ರೀಡಾಪಟುಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳ ದಂತೆ ಅವ್ಯವಸ್ಥೆಗಳು ಕಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಇಲ್ಲಿ ನಡೆದಿರುವ ಅವೈಜ್ಞಾನಿಕ, ಕಳಪೆ ಗುಣಮಟ್ಟದ ಕಾಮಗಾರಿ ಹಾಗೂ ಮುಂದೆ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸುವ ದಲ್ಲದೆ ವಿಧಾನ ಪರಿಷತ್‍ನಲ್ಲು ಪ್ರಸ್ತಾಪಿಸುವದಾಗಿ ವೀಣಾ ಅಚ್ಚಯ್ಯ ಭರವಸೆ ನೀಡಿದರು.