ಮಡಿಕೇರಿ, ನ. 13: ಮಡಿಕೇರಿ ಕೊಡವ ಸಮಾಜಕ್ಕೆ ಸೇರಿದ ನಗರದ ಚೈನ್ ಗೇಟ್ ಬಳಿಯಿರುವ ಜಾಗದ ಮೂಲಕ ಸಮಾಜದ ಅನುಮತಿ ಇಲ್ಲದೆ ಕಾಮಗಾರಿಯೊಂದನ್ನು ಕೆಲವರು ನಡೆಸಲು ಮುಂದಾಗಿದ್ದ ಪ್ರಕರಣ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ನ. 10 ರಂದು ಕೊಡವ ಸಮಾಜದ ಜಾಗದ ಮೂಲಕ ಅಲ್ಲಿನ ಹೋಂಸ್ಟೇಯೊಂದರ ತ್ಯಾಜ್ಯವನ್ನು ಹರಿಸಲು ಜೆಸಿಬಿ ಯಂತ್ರದ ಮೂಲಕ ಸಮಾಜದ ಆಡಳಿತ ಮಂಡಳಿಯ ಒಪ್ಪಿಗೆ ಇಲ್ಲದೆ ಚರಂಡಿ ನಿರ್ಮಿಸುವ ಪ್ರಯತ್ನ ನಡೆದಿತ್ತು. ಇದು ಗಮನಕ್ಕೆ ಬರುತ್ತಿದ್ದಂತೆ ಇದನ್ನು ತಡೆ ಹಿಡಿಯಲಾಗಿತ್ತು. ಇದೀಗ ತಾ. 12 ರಂದು ತೆಗೆದಿದ್ದ ಚರಂಡಿಯನ್ನು ಮುಚ್ಚುವದು ಹಾಗೂ ತಂತಿ ಬೇಲಿ ನಿರ್ಮಾಣಕ್ಕೆ ಸಮಾಜ ಮುಂದಾಗಿತ್ತು. ಈ ಸಂದರ್ಭ ನಗರಸಭಾ ಆಯುಕ್ತ ಎಂ.ಎಲ್. ರಮೇಶ್ ಹಾಗೂ ಸ್ಥಳೀಯ ನಿವಾಸಿ ಪಿ.ಟಿ. ಉಣ್ಣಿಕೃಷ್ಣ ಅವರುಗಳು ಸ್ಥಳಕ್ಕೆ ತೆರಳಿ ಕೆಲಸ ನಿರ್ವಹಿಸುತ್ತಿದ್ದ ಮಂದಿಯನ್ನು ಕೆಲಸ ಸ್ಥಗಿತಗೊಳಿಸುವಂತೆ ಸೂಚಿಸಿದ್ದ ರೆನ್ನಲಾಗಿದೆ.
ಈ ವಿಚಾರದ ಬಗ್ಗೆ ಸಮಾಜದ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದ್ದು ಬಳಿಕ ಉಣ್ಣಿಕೃಷ್ಣ ವಿರುದ್ಧ ಜಾಗಕ್ಕೆ ಅತಿಕ್ರಮ ಪ್ರವೇಶ ಹಾಗೂ ಅನಧಿಕೃತ ಕೆಲಸದ ಬಗ್ಗೆ ದೂರು ನೀಡಿದ್ದರು. ನ. 10 ರಂದು ನಡೆಸಲಾಗಿದ್ದ ಕೆಲಸದ ಹಿಂದೆ ಇವರ ಪಾತ್ರ ಇದೆ ಎಂಬ ಹಿನ್ನೆಲೆಯಲ್ಲಿ ಆಕ್ಷೇಪ ವ್ಯಕ್ತಪಡಿzಸಿ ಈ ಪುಕಾರು ನೀಡಲಾಗಿತ್ತು. ಅಲ್ಲದೆ ನಗರಸಭಾ ಆಯುಕ್ತರಿಗೆ ಈ ಬಗ್ಗೆ ಸಮಜಾಯಿಷಿಕೆ ನೀಡುವಂತೆ ಆಗ್ರಹಿಸಿ ಪ್ರತ್ಯೇಕ ಪತ್ರವನ್ನು ನಿನ್ನೆ ಕಳುಹಿಸಲಾಗಿತ್ತು.
ಬಳಿಕ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರು ಎರಡು ಕಡೆಯವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಸಮಾಜದ ಅನುಮತಿ ಇಲ್ಲದೆ ಕಾಮಗಾರಿ ನಡೆಸಲು ಕುಮ್ಮಕ್ಕು ನೀಡಿರುವ ವಿಚಾರದ ಬಗ್ಗೆ ಸಮಾಜದ ಪದಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಉಣ್ಣಿಕೃಷ್ಣ ಅವರು ಕ್ಷಮೆಯಾಚಿಸು ವದರೊಂದಿಗೆ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.
ಈ ಸಂದರ್ಭ ಆಡಳಿತ ಮಂಡಳಿ ಪ್ರಮುಖರಾದ ಮಾದೇಟಿರ ಬೆಳ್ಯಪ್ಪ, ಪೊನ್ನಚೆಟ್ಟಿರ ಸುರೇಶ್, ಚೊಟ್ಟೆರ ಅಪ್ಪಾಜಿ, ಪುಟ್ಟಿಚಂಡ ಡಾನ್ ಮತ್ತಿತರರು ಹಾಜರಿದ್ದರು.