ನವದೆಹಲಿ, ನ. 13: ರಾಜ್ಯದ ಹದಿನೇಳು ಮಂದಿ ಅನರ್ಹ ಶಾಸಕರಿಗೆ ಸ್ವಲ್ಪ ನಿರಾಳತೆ ಸಿಕ್ಕಿದ್ದು, ಕರ್ನಾಟಕದಲ್ಲಿ ನಡೆಯುವ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ರಾಜ್ಯದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ನೇತೃತ್ವದ ಪೀಠ ಬುಧವಾರ ಈ ಆದೇಶ ಪ್ರಕಟಿಸಿದೆ.

17 ಮಂದಿ ಶಾಸಕರನ್ನು ಅನರ್ಹ ಮಾಡಿದ ಸ್ಪೀಕರ್ ನಿರ್ಧಾರವನ್ನೂ ಎತ್ತಿ ಹಿಡಿದಿದೆ. ಆದರೆ 2023 ರವರೆಗೆ ಅಂದರೆ ಈಗಿನ ವಿಧಾನಸಭಾ ಅವಧಿ ಮುಗಿಯವರೆಗೆ ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿಯಲ್ಲ. ಹೀಗಾಗಿ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ತೀರ್ಪು ನೀಡಿದೆ. ಮರು ಚುನಾವಣೆಯಲ್ಲಿ ಆಯ್ಕೆಯಾಗದ ಹೊರತು ಸರ್ಕಾರದಲ್ಲಿ ಯಾವದೇ ಅಧಿಕಾರ ಹೊಂದುವಂತಿಲ್ಲ ಎಂದೂ ತಿಳಿಸಿದೆ. ಕಾಂಗ್ರೆಸ್‍ನ 14, ಜೆಡಿಎಸ್‍ನ 3 ಶಾಸಕರನ್ನು ಕಳೆದ ಜುಲೈ ತಿಂಗಳಿನಲ್ಲಿ ಆಗಿನ ಸ್ಪೀಕರ್ ಆಗಿದ್ದ ಕೆ.ಆರ್. ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು.‘‘ಸಂಸದೀಯ ವ್ಯವಸ್ಥೆಯಲ್ಲಿ ನೈತಿಕತೆ ಮುಖ್ಯ. ಈ ನೈತಿಕತೆ ಆಡಳಿತ ಪಕ್ಷ, ವಿರೋಧ ಪಕ್ಷಕ್ಕೂ ಇರಬೇಕು’’ ಎಂದು ನ್ಯಾಯಮೂರ್ತಿ ಎನ್.ವಿ. ರಮಣ ಅಭಿಪ್ರಾಯಪಟ್ಟರು.

ಬಿಜೆಪಿ ಸೇರ್ಪಡೆ : ಡಿಸಿಎಂ

ಅನರ್ಹತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಎಲ್ಲಾ 17 ಅನರ್ಹ ಶಾಸಕರು ಗುರುವಾರದಂದು ಬಿಜೆಪಿ ಸೇರಲಿದ್ದಾರೆ ಎಂದು ಉಪ

(ಮೊದಲ ಪುಟದಿಂದ) ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಬುಧವಾರ ಹೇಳಿದ್ದಾರೆ.

ಅನರ್ಹ ಶಾಸಕರು ಬಿಜೆಪಿ ಸೇರಲು ಆಸಕ್ತಿ ತೋರಿಸುತ್ತಿದ್ದು, ಈ ಸಂಬಂಧ ಈಗಾಗಲೇ ನಮ್ಮ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿದ್ದಾರೆ. ಅವರನ್ನು ಪಕ್ಷಕ್ಕೆ ಸ್ವಾಗತಿಸಲಾಗುತ್ತಿದೆ ಎಂದು

ಇಂದು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥ ನಾರಾಯಣ ಅವರು, ಎಲ್ಲಾ ಅನರ್ಹ ಶಾಸಕರು ಗುರುವಾರ ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರಲಿದ್ದಾರೆ ಎಂದರು.

ಡಿಸೆಂಬರ್ 5ರಂದು ನಡೆಯುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರು ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ಬಗ್ಗೆಯೂ ಮುನ್ಸೂಚನೆ ನೀಡಿದರು.