ಬೆಂಗಳೂರು, ನ. 13: ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಕಾಫಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡಲು ಕಾಫಿ ಕೃಷಿ ಭೂಮಿಯನ್ನು ಭೋಗ್ಯಕ್ಕೆ ನೀಡುವ ಕಾಯ್ದೆಗೆ ತಿದ್ದುಪಡಿ ತರಲಾಗುವದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದರು.ಕಾಫಿ ಪ್ಲಾಂಟರ್ ಅಸೋಸಿಯೇಷನ್‍ನ 61ನೇ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಫಿ ಕೃಷಿ ಭೂಮಿಯನ್ನು ಭೋಗ್ಯಕ್ಕೆ ನೀಡುವ ಕಾಯ್ದೆಗೆ ತಿದ್ದುಪಡಿ ತರುವ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲೂ ಪ್ರಸ್ತಾಪ ಮಾಡಲಾಗಿದೆ ಎಂದರು.ನೆರೆಹಾವಳಿಯಿಂದ ಕಾಫಿ ಬೆಳೆ ಕೂಡ ನಾಶವಾಗಿದೆ. ಆದರೆ ಕೇಂದ್ರದ ಬೆಳೆ ವಿಮಾ ವ್ಯಾಪ್ತಿಗೆ ಒಳಪಡದೆ ಇರುವದರಿಂದ ಪರ್ಯಾಯ ಮೊತ್ತವು ನಿರೀಕ್ಷಿಸಿದಷ್ಟು ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು; ಕಾಫಿ ಬೆಳೆಗಾರರು ಒಪ್ಪುವದಾದರೆ ಕಾಫಿ ಬೆಳೆಯನ್ನು ಬೆಳೆ ವಿಮೆ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವದು.

ಕಾಫಿ ಉದ್ಯಮವನ್ನು ನಂಬಿಕೊಂಡು 10 ಲಕ್ಷಕ್ಕೂ ಎಂದು ಹೆಚ್ಚು ಮಂದಿ ಅವಲಂಬಿತರಾಗಿದ್ದಾರೆ. ಈ ಉದ್ಯಮಕ್ಕೆ ಪೆಟ್ಟು ಬಿದ್ದರೆ ಲಕ್ಷಾಂತರ ಮಂದಿಗೆ ಪರ್ಯಾಯ ಉದ್ಯೋಗ ಕಲ್ಪಿಸುವದು ಅಸಾಧ್ಯ;

(ಮೊದಲ ಪುಟದಿಂದ) ಕಾಫಿ ಉದ್ಯಮದ ಬಗ್ಗೆ ಸರ್ಕಾರಗಳಿಗೆ ಅನುಕಂಪ ಇಲ್ಲ. ಅಲ್ಲದೆ ಈ ಬೆಳೆಗಾರರು ಯಾವದೇ ಲಾಬಿಗೆ ಮಾಡುವದಿಲ್ಲ. ಅಡಿಕೆ ಬೆಳೆಗಾರರು ದೆಹಲಿಗೆ ತೆರಳಿ ಲಾಬಿ ಮಾಡುವದರಿಂದ ಅವರ ಬೇಡಿಕೆಗಳೆಲ್ಲ ಈಡೇರುತ್ತದೆ ಎಂದು ಅವರು ಹೇಳಿದರು.

ಕಾಫಿ ಬೆಳೆಗಾರರ ಸುರಕ್ಷತೆ ದೃಷ್ಟಿಯಿಂದ ಆಯುಧಗಳನ್ನು ಇಟ್ಟುಕೊಂಡಿರುತ್ತಾರೆ. ಯಾರಿಗೆ ಕ್ರಿಮಿನಲ್ ಹಿನ್ನೆಲೆ ಇರುತ್ತದೆಯೋ ಅಂತಹವರ ಆಯುಧಗಳನ್ನು ವಶಪಡಿಸಿಕೊಳ್ಳಲಿ. ಆದರೆ ಉತ್ತಮ ನಾಗರಿಕರ ಆಯುಧಗಳನ್ನು ವಶಪಡಿಸಿಕೊಳ್ಳದಿರಲು ಕಾಯ್ದೆಯಲ್ಲಿ ಸಣ್ಣದೊಂದು ತಿದ್ದುಪಡಿ ತರುವ ಅಗತ್ಯವಿದೆ ಎಂದು ಸಿ.ಟಿ. ರವಿ ಅಭಿಪ್ರಾಯಿಸಿದರು.

ಕಾಫಿಗೆ ಹೆಚ್ಚು ಚಿಕೋರಿಯನ್ನು ಬೆರೆಸಿ, ಮಾರಾಟ ಮಾಡುವದನ್ನು ಆಹಾರ ಕಲಬೆರಿಕೆ ಕಾಯ್ದೆಯಡಿ ಜಾರಿಗೆ ತರಬೇಕು. ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವದು ಅಗತ್ಯವಿದೆ ಎಂದು ಅವರು ಹೇಳಿದರು.

ಹೊಟೇಲ್‍ಗಳಲ್ಲಿ ಕಾಫಿ ಮತ್ತು ಚಿಕೋರಿಯನ್ನು ಪ್ರತ್ಯೇಕವಾಗಿ ಇಡುವ ಪದ್ಧತಿ ಆರಂಭವಾಗಬೇಕು. ಅಗತ್ಯಬಿದ್ದವರು ಕಾಫಿಗೆ ಚಿಕೋರಿಯನ್ನು ಬೆರೆಸಿಕೊಳ್ಳಬೇಕು. ಕಾಫಿಗೆ ಶೇ. 30 ರಷ್ಟು ಚಿಕೋರಿ ಯನ್ನು ಬೆರಸಲಾಗು ತ್ತಿದ್ದರೂ ಇತ್ತೀಚಿನ ದಿನಗಳಲ್ಲಿ ಶೇ. 90ರಷ್ಟಕ್ಕೆ ಏರಿಕೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾಫಿ ಉದ್ಯಮಕ್ಕೆ 25 ಲಕ್ಷ ರೂ. ಸಾಲಕ್ಕೆ ಶೇ. 6 ರಷ್ಟು ಬಡ್ಡಿ ವಿಧಿಸಬೇಕೆಂಬ ಬೇಡಿಕೆ ರಾಜ್ಯ ಸರ್ಕಾರದ ಕೈಯ್ಯಲ್ಲಿಯಿಲ್ಲ. ಕೇಂದ್ರ ಸರ್ಕಾರ ಸಚಿವರೊಂದಿಗೆ ಮಾತು ಕತೆ ನಡೆಸುವದಾಗಿ ಭರವಸೆ ನೀಡಿದರು.

ಸಮಾರಂಭದಲ್ಲಿ ಕರ್ನಾಟಕ ಪ್ಲಾಂಟರ್ ಅಸೋಸಿಯೇಷನ್ ಅಧ್ಯಕ್ಷ ಎಂ. ಗಣಪತಿ ಪ್ರಾಸ್ತಾವಿಕ ಭಾಷಣ ಮಾಡಿದರು. ಉಪಾಧ್ಯಕ್ಷ ಶಿರಸ್ ವಿಜಯೇಂದ್ರ ಹೊಂದಿಸಿದರು.