ವೀರಾಜಪೇಟೆ, ನ. 13: ಯುವ ಪೀಳಿಗೆಯು ಇಂದು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಕೊನೆಗಾಣಿಸಲು ಹೊರಟಿರುವದು ವಿಷಾಧನೀಯ ಎಂದು ವೀರಾಜ ಪೇಟೆ ನಗರ ಠಾಣಾಧಿಕಾರಿ ಎಂ. ಮರಿಸ್ವಾಮಿ ಅಭಿಮತ ವ್ಯಕ್ತಪಡಿಸಿದರು.

ವೀರಾಜಪೇಟೆ ನಗರ ನಾಲ್ಕು ಸ್ನೇಹಿತರ ಬಳಗವು ಆಯೋಜಿ ಸುತ್ತಿರುವ ವೀರಾಜಪೇಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಎರಡನೆ ಆವೃತ್ತಿಯ ಪ್ರಮುಖ ಆಟಗಾರರ ಬಿಡ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವ ಜನಾಂಗವು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಲ್ಲಿ ದುಶ್ಚಟಗಳಿಂದ ದೂರ ಉಳಿಯಬಹುದು. ಇದರಿಂದ ಮನ ಕ್ಲೇಷಗಳು ದೂರವಾಗಿ ದೇಹವನ್ನು ಸಮತೋಲನದಲ್ಲಿಡಲು ಸಾಧ್ಯ ಎಂದು ಹೇಳಿದರು.

ನಗರ ಠಾಣೆಯ ಎ.ಎಸ್.ಐ. ಮಾದಯ್ಯ, ಪಟ್ಟಣ ಪಂಚಾಯಿತಿ ಸದಸ್ಯರಾದ ರಾಜೇಶ್ ಪದ್ಮನಾಭ, ಮೊಹಮ್ಮದ್ ರಾಫಿ, ಹೆಚ್.ಎಸ್. ಮತೀನ್, ಹೊಟೇಲ್ ವ್ಯವಸ್ಥಾಪಕ ಪ್ರವೀಣ್ ಅವರುಗಳು ಸ್ನೇಹಿತ ಮಿತ್ರರು ಆಯೋಜಿಸುತ್ತಿರುವ ಕ್ರೀಡಾ ಹಬ್ಬಕ್ಕೆ ಶುಭಕೋರಿ ಮಾತನಾಡಿದರು.

ವೀರಾಜಪೇಟೆ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿ ತಾ. 24 ರಿಂದ ಆರಂಭವಾಗಲಿದ್ದು ಒಟ್ಟು 12 ತಂಡಗಳು ಕ್ರೀಡಾ ಹಬ್ಬದಲ್ಲಿ ಭಾಗವಹಿಸಲಿದೆ. ಪ್ರಥಮ ಹಂತವಾಗಿ ಒಟ್ಟು 28 ಮಂದಿ ಪ್ರಮುಖ ಆಟಗಾರರ ಹರಾಜು ಪ್ರಕ್ರಿಯೆಗಳು ಕೊನೆಗೊಂಡಿದ್ದು, ತಾ. 15 ರಂದು ಇನ್ನುಳಿದ ಆಟಗಾರರು ಹರಾಜು ಮೂಲಕ ತಂಡಕ್ಕೆ ಸೇರ್ಪಡೆ ಯಾಗಲಿದ್ದಾರೆ ಎಂದು ಆಯೋಜಕ ಇಂತಿಯಾಜ್ ಮಾಹಿತಿ ಒದಗಿಸಿದರು.

ಆಯೋಜಕರಾದ ನಿತಿನ್ ಲೇಪು, ಅಭಿಲಾಷ್, ಶಾನ್‍ವಜ್ ಮತ್ತು 12 ತಂಡಗಳ ಮಾಲೀಕರು ಹಾಗೂ ಆಟಗಾರರು ಹಾಜರಿದ್ದರು.