*ಗೋಣಿಕೊಪ್ಪಲು, ನ. 13: ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ನಿರಂತರ ಉಪಟಳಕ್ಕೆ ಬೆಳೆಗಾರರು ಹಾಗೂ ರೈತರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಕಣ್ಣೀರು ಹಾಕುತ್ತಿದ್ದಾರೆ.
ಒಂದಲ್ಲ ಒಂದು ರೀತಿಯಲ್ಲಿ ಪ್ರಾಣಿಗಳ ದಾಂಧಲೆ ರೈತರ, ಬೆಳೆಗಾರರ ಬದುಕನ್ನು ಅತಂತ್ರ ಸ್ಥಿತಿಗೆ ದೂಡುತ್ತಿದೆ. ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದರೂ ಕಾರ್ಯಗತವಾಗುತ್ತಿಲ್ಲ. ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳಲ್ಲಿ ಪ್ರಾಣಿಗಳ ಉಪಟಳ ಮಿತಿಮೀರಿದೆ. ಆನೆಗಳ ದಾಳಿ, ಮಂಗಗಳ ಕಾಟ, ಹುಲಿ ದಾಳಿಯ ಆತಂಕ, ಹಂದಿಗಳ ಉಪಟಳ ಸೇರಿದಂತೆ ಇದೀಗ ಕರಡಿಗಳ ಉಪಟಳ ಬೆಳೆಗಾರರನ್ನು ಮತ್ತಷ್ಟು ಹೈರಾಣಾಗಿಸುತ್ತಿದೆ.
ಬಾಳೆಲೆ, ನಿಟ್ಟೂರು ಗ್ರಾಮದಲ್ಲಿ ಕಾಣಿಸಿಕೊಂಡ ಕರಡಿ ಜನರಲ್ಲಿ ಭಯವನ್ನು ಮೂಡಿಸಿದೆ. ಕಳೆದ ಒಂದು ವರ್ಷಗಳಿಗೂ ಹೆಚ್ಚು ಕಾಲ ಬಾಳೆಲೆ ಭಾಗದಲ್ಲಿನ ಕಾಫಿ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕರಡಿ ಉಪಟಳ ಮಿತಿಮೀರಿದೆ. ಇದರಿಂದ ಬೆಳೆಗಾರರು, ರೈತರು ಕಂಗಾಲಾಗಿದ್ದಾರೆ. ತೋಟ ಕಾರ್ಮಿಕರು, ಕೆಲಸಗಳಿಗೆ ತೆರಳಲು ಭಯಪಡುತ್ತಿದ್ದಾರೆ. ಒಂಟಿಯಾಗಿ ಗ್ರಾಮೀಣ ಭಾಗದ ರಸ್ತೆಗಳಲ್ಲಿ ತೆರಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಈ ಭಾಗದಲ್ಲಿ ಕರಡಿ ಕಾಣಿಸಿಕೊಂಡು ಭಯ ಹುಟ್ಟಿಸುತ್ತಿದೆ. ಕರಡಿ ಕಂಡವರು ಕರಡಿಯ ದಾಳಿಗೆ ಸಿಗಬಹುದು ಎಂಬ ಆತಂಕದಲ್ಲಿ ಎದ್ದುಬಿದ್ದು ಓಡಿ ಸಣ್ಣಪುಟ್ಟ ಗಾಯಗಳು ಮಾಡಿಕೊಂಡ ಘಟನೆಯು ನಡೆದಿದೆ. ಕರಡಿ ಜೋರಾಗಿ ಅರಚುವ ಶಬ್ದ ಕೇಳಿ ಸ್ಥಳೀಯ ಕಿರಿಯ ಆರೋಗ್ಯ ಸಹಾಯಕಿಯೊಬ್ಬರು ಭಯಬೀತರಾಗಿ ಓಡಿದ ಘಟನೆಯೊಂದು ವರದಿಯಾಗಿದೆ.
ಬೆಳಿಗ್ಗಿನ ಜಾವ ವಾಹನಗಳನ್ನು ಸಹ ಕರಡಿ ಅಡ್ಡಹಾಕುತ್ತಿದೆ. ರಾತ್ರಿ ಇದರ ಆತಂಕ ತಪ್ಪಿದ್ದಲ್ಲ. ಬಾಳೆಲೆ ವ್ಯಾಪ್ತಿಯ ಜಾಗಲೆ, ನಲ್ಲೂರು, ಕಾರ್ಮಾಡು, ಮಲ್ಲೂರು, ವಡ್ಡರಮಾಡು, ನಿಟ್ಟೂರು ಭಾಗಗಳಲ್ಲಿ ಕರಡಿಯ ನಿತ್ಯ ಸಂಚಾರದ ಪ್ರದೇಶವಾಗಿದೆ. ಈ ಭಾಗದಲ್ಲಿ ಬೆಳೆಗಾರರ ಬೆಳೆಗಳನ್ನು ನಾಶಪಡಿಸುವ ಕಿಡಿಗೇಡಿತನ ಈ ಕರಡಿಯದಾಗಿದೆ. ನಿಟ್ಟೂರು ಗ್ರಾಮದ ಅಳಮೇಂಗಡ ಬೋಸ್ ಮಂದಣ್ಣ ಅವರ ಕಾಫಿ ತೋಟದಲ್ಲಿದ್ದ ಸಪೆÇೀಟ ಹಣ್ಣುಗಳನ್ನು ಕಿತ್ತು ಹಾಕಿ ದಾಂಧಲೆ ನಡೆಸಿದೆ. ಕಳೆದ ಒಂದು ವರ್ಷದಿಂದ ಕರಡಿಯ ಅಟ್ಟಹಾಸಕ್ಕೆ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಫಸಲು ನಷ್ಟವಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಬಾಳೆಲೆ ವ್ಯಾಪ್ತಿಯಲ್ಲಿ ನಿರಂತರವಾಗಿ ಈ ರೀತಿಯ ಕಾಡುಪ್ರಾಣಿಗಳ ಉಪಟಳ ನಡೆಯುತ್ತಿದೆ. ಇದರಿಂದ ರೈತರು, ಬೆಳೆಗಾರರು ನಷ್ಟವನ್ನು ಅನುಭವಿಸು ತ್ತಿದ್ದಾರೆ.
ಅರಣ್ಯ ಅಧಿಕಾರಿಗಳು ವೈಜ್ಞಾನಿಕ ರೀತಿಯಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರೆ ಕಾಡು ಪ್ರಾಣಿಗಳ ಉಪಟಳವನ್ನು ತಡೆಗಟ್ಟಬಹುದಾಗಿದೆ. ಆದರೆ ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಿದರೆ ಸಮಸ್ಯೆ ಉಲ್ಬಣಿಸುತ್ತಿರಲಿಲ್ಲ ಎಂಬದು ಜನರ ಅಭಿಪ್ರಾಯವಾಗಿದೆ. ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಈ ಭಾಗದಲ್ಲಿ ಬದುಕು ನಡೆಸುವದೇ ಕಷ್ಟಕರವಾಗಿದೆ.
ಇದೆಲ್ಲಾ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಕಂಡುಕೊಳ್ಳುವ ಅಗತ್ಯ ಎದುರಾಗಿದೆ. ಕಾಡು ಪ್ರಾಣಿಗಳು ಅರಣ್ಯದಿಂದ ಗ್ರಾಮಕ್ಕೆ ಬಾರದಂತೆ ತಡೆಯಲು ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಆನೆಗಳು ಗ್ರಾಮಕ್ಕೆ ಬಾರದಂತೆ ಎರಡೂವರೆ ಕಿ.ಮೀ. ವ್ಯಾಪ್ತಿಯ ಮಲ್ಲೂರು ಅರಣ್ಯ ವ್ಯಾಪ್ತಿಯಿಂದ ಕುಂಬಾರ ಕಾಲೋನಿವರೆಗಿನ ರೈಲ್ವೆ ಕಂಬಿ ಅಳವಡಿಕೆಯು ಸಫಲತೆಯನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲದೇ ಕಾನೂರು, ನಿಡುಗುಂಬ, ಕೋತೂರು ಗ್ರಾಮಗಳಲ್ಲಿಯು ಜನ ನಿತ್ಯ ಆತಂಕದಲ್ಲೇ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.
- ಎನ್.ಎನ್. ದಿನೇಶ್