ಸುಂಟಿಕೊಪ್ಪ, ನ. 9: ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವೆ ಖಾಯಂ ಗೊಳಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಶಾಸಕ ಅಪ್ಪಚ್ಚು ರಂಜನ್ ಅವರ ಮನೆಗೆ ತೆರಳಿ ಮನವಿ ಸಲ್ಲಿಸಿದರು. ರಾಜ್ಯದ 412 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹಲವಾರು ವರ್ಷಗಳಿಂದ ಅತ್ಯಂತ ಕಡಿಮೆ ಗೌರವ ವೇತನದಲ್ಲಿ ಸೇವೆ ಸಲ್ಲಿಸಿದ್ದೇವೆ. ರಾಜ್ಯದಲ್ಲಿ ಒಟ್ಟಾರೆಯಾಗಿ 12,800 ರಷ್ಟು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದೇವೆ. ಹೆಚ್ಚಿನ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರಿಲ್ಲದೇ ಅತಿಥಿ ಉಪನ್ಯಾಸಕರೆ ಎಲ್ಲ ಚಟುವಟಿಕೆಗಳನ್ನು ವಹಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಕೇವಲ 8 ರಿಂದ 9 ತಿಂಗಳು ಮಾತ್ರ ಸಂಬಳ ನೀಡುತ್ತಾರೆ. ಇಗಾಗಲೇ ಒಂದು ತಿಂಗಳ ವೇತನ ಮಾತ್ರ ಬಿಡುಗಡೆಯಾಗಿದೆ. ಅಲ್ಲದೇ ಸರ್ಕಾರ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಮುಂದಾಗಿದ್ದು, ಇದರಿಂದಾಗಿ ಸಾವಿರಾರು ಅತಿಥಿ ಉಪನ್ಯಾಸಕರು ಬೀದಿಗೆ ಬೀಳಲಿದ್ದಾರೆ. ಆದ್ದರಿಂದ ಸರ್ಕಾರ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಬೇಕು. ವೇತನವನ್ನು ಹೆಚ್ಚಿಸಿ ಶೈಕ್ಷಣಿಕ ಪ್ರಾರಂಭದಿಂದಲೇ ಜಾರಿಯಾಗುವಂತೆ ಅನುದಾನ ಬಿಡುಗಡೆಗೊಳಿಸಬೇಕು ಎಂದು ಶಾಸಕರಲ್ಲಿ ತಮ್ಮ ಅಳಲನ್ನು ತೋಡಿ ಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಅಪ್ಪಚ್ಚು ರಂಜನ್, ಕಡಿಮೆ ವೇತನಕ್ಕೆ ಅದರಲ್ಲೂ ತಿಂಗಳಿಗೆ ನೀಡದೇ ಇರುವದರಿಂದ ಜೀವನ ನಡೆಸಲು ಸಾದ್ಯವಾಗುವದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುವ ಸಾದ್ಯತೆ ಇರುವದರಿಂದ ಡಿ. 6 ರ ನಂತರ ಕೊಡಗು ಜಿಲ್ಲೆಯ ಅತಿಥಿ ಉಪನ್ಯಾಸಕರ ನಿಯೋಗ ದೊಂದಿಗೆ ತಾವೇ ಖುದ್ದಾಗಿ ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಚರ್ಚಿಸುವದಾಗಿ ಭರವಸೆ ನೀಡಿದರು.
ಅತಿಥಿ ಉಪನ್ಯಾಸಕ ಸಂಘದ ಅಧ್ಯಕ್ಷ ಶ್ಯಾಮ್ ಪ್ರಸಾದ್, ಕಾರ್ಯದರ್ಶಿ ಪಿ.ಬಿ. ಸುರೇಶ್, ಸತೀಶ್ ಇದ್ದರು.