ಕೂಡಿಗೆ, ನ. 9: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದ ರಸ್ತೆಯು ತೀರಾ ಹಾಳಾಗಿದ್ದು, ರಸ್ತೆ ದುರಸ್ತಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಿಂದ ದುರಸ್ತಿ ಕಾಣದೆ ನೆನೆಗುದಿಗೆ ಬಿದ್ದಿರುವ ಈ ರಸ್ತೆಯು ಗುಂಡಿಗಳಿಂದ ಕೂಡಿದ್ದು, ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸಲು ಹರಸಾಹಸ ಮಾಡಬೇಕಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರಸ್ತೆ ದುರಸ್ತಿ ಕಾರ್ಯ ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟದ್ದು ಎಂದು ಕೃಷಿ ಇಲಾಖೆಯವರು ನಿರ್ಲಕ್ಷಿಸುತ್ತಿದ್ದಾರೆ. ಕೃಷಿ ಇಲಾಖೆಯ ಸ್ಥಳವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕ್ರೀಡಾ ಶಾಲೆಗೆ ನೀಡಿದ್ದು, ಮಿನಿ ವಿಮಾನ ನಿಲ್ದಾಣಕ್ಕೆ ಜಾಗವನ್ನು ಮೀಸಲಿಡಲು ಉನ್ನತ ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಯಾರೂ ಕೂಡಾ ರಸ್ತೆ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕುಶಾಲನಗರದಿಂದ ಸೈನಿಕ ಶಾಲೆವರೆಗೆ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಈವರೆಗೆ ಯಾವದೇ ಬೆಳವಣಿಗೆ ಕಂಡಿಲ್ಲ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಈ ಬಗ್ಗೆ ಗಮನ ಹರಿಸಿ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು ಎಂದು ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.