*ಗೋಣಿಕೊಪ್ಪಲು: ಕ್ರೀಡೆ, ಸಂಗೀತ, ನೃತ್ಯ, ಪ್ರಬಂಧ ಸ್ಪರ್ಧೆ, ಭಾಷಣ, ಚರ್ಚಾಸ್ಪರ್ಧೆ, ಮೆರವಣಿಗೆ, ಕನ್ನಡ ಕವಿಗಳ ವೇಷಭೂಷಣ ಮೊದಲಾದ ಹತ್ತು ಹಲವು ಚಟುವಟಿಕೆಗಳ ಮೂಲಕ ಕನ್ನಡ ರಾಜ್ಯೋತವ ಸಮಾರಂಭವನ್ನು ಪಾಲಿಬೆಟ್ಟ ಸಮೀಪದ ಚೆನ್ನಯ್ಯನಕೋಟೆಯಲ್ಲಿ ಆಚರಿಸಲಾಯಿತು.

ಅಲ್ಲಿನ ಸರ್ವ ಸಹಾಯಿ ಮಿತ್ರ ಮಂಡಳಿ ವತಿಯಿಂದ ಜರುಗಿದ 64ನೇ ವರ್ಷದ ರಾಜ್ಯೋತ್ಸವವನ್ನು ಮಕ್ಕಳು ಕನ್ನಡದ ವಿವಿಧ ಕವಿಗಳ ವೇಷಧರಿಸಿ ಭುವನೇಶ್ವರಿ ಪ್ರತಿಮೆಯೊಂದಿಗೆ ಕನ್ನಡದ ಧ್ವಜ ಹಿಡಿದು ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸುವ ಮೂಲಕ ಆಚರಿಸಲಾಯಿತು.

ಚೆನ್ನಯ್ಯನಕೋಟೆ ಸುತ್ತಮುತ್ತಲಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕನ್ನಡ ಗೀತೆಗಳಿಗೆ ಸುಂದರವಾಗಿ ನಲಿದರು. ಸ್ಥಳೀಯ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆರಂಭವಾದ ಕಾರ್ಯಕ್ರಮ ರಾತ್ರಿಯವರೆಗೂ ಜರುಗಿತು.

ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿದ್ದಾಪುರ ಪ್ರೌಢಶಾಲೆಯ ಶಿಕ್ಷಕಿ ಉಮಾ, ಅನೇಕ ಮಹನಿಯರ ತ್ಯಾಗ ಬಲಿದಾನಗಳ ಮೂಲಕ 64 ವರ್ಷಗಳ ಹಿಂದೆ ನಾಡು ಒಂದಾಯಿತು. ಕನ್ನಡವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಕೆಲಸ ಎಲ್ಲರದ್ದಾಗಿದೆ ಎಂದರು.

ಪುಟಾಣಿ ಮಕ್ಕಳಿಗೆ ಕನ್ನಡ ನಾಡು ನುಡಿ ಸಂಸ್ಕøತಿ ಬಗ್ಗೆ ಅರಿವು ಮೂಡಿಸಬೇಕಾದರೆ ಕನ್ನಡದ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಸಂಗೀತ, ನೃತ್ಯದ ಮೂಲಕ ನಾಡಿನ ಹಿರಿಮೆಯನ್ನು ಅರ್ಥೈಸಬೇಕು ಎಂದು ಹೇಳಿದರು.

ಸಾಹಿತಿ ಡಾ. ಜೆ. ಸೋಮಣ್ಣ ಮಾತನಾಡಿ, ಕನ್ನಡದ ಮೇರು ಕವಿಗಳಾದ ಪಂಪ, ಕುಮಾರವ್ಯಾಸ, ದಾಸರು, ಕುವೆಂಪು ಅವರ ಸಾಹಿತಿಗಳು ಹುಟ್ಟಿದ ನಾಡಿನಲ್ಲಿ ನಮ್ಮ ಮಕ್ಕಳು ಜನಿಸಿರುವದಕ್ಕೆ ಹೆಮ್ಮೆ ಪಡಬೇಕು. ಅವರ ವಾರಸುದಾರರು ಎಂಬದನ್ನು ಅಭಿಮಾನದಿಂದ ಹೇಳಿಕೊಳ್ಳಬೇಕು. ಕನ್ನಡದ ಮೇಲಿನ ಉತ್ಸಾಹ ಮತ್ತು ಅಭಿಮಾನ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಅದು ಬದುಕಿನ ಉಸಿರಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಕನ್ನಡ ಉದ್ಯೋಗದ ಭಾಷೆಯಾಗಬೇಕು. ಬದುಕಿಗೆ ಆಸರೆಯಾದ ಭಾಷೆ ಯಾವತ್ತೂ ಸೊರಗುವದಿಲ್ಲ. ಸರಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ನುಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಕೆ. ಗಣೇಶ್ ಮಾತನಾಡಿದರು.

ಸರ್ವ ಸಹಾಯಿ ಮಿತ್ರ ಮಂಡಳಿ ಅಧ್ಯಕ್ಷ ಅಬ್ದುಲ್ ರೆಹಮನ್ ಅಧ್ಯಕ್ಷತೆ ವಹಿಸಿದ್ದರು. ದಾನಿಗಳಾದ ವಾಟೇರಿರ ಸುರೇಶ್ ಸೋಮಯ್ಯ, ವರ್ತಕ ರಾವತ್, ಉಂಬಾಯಿ, ಎಎಸ್‍ಐ ಗಣಪತಿ, ಆರ್‍ಎಫ್‍ಓ ಅಶೋಕ್ ಹುನುಗುಂದ, ಸ್ಥಳೀಯ ಮುಖಂಡರಾದ ಶಿಲ್ಪ, ಕುಮಾರ್, ಶರತ್, ಟಾಮಿ ಥಾಮಸ್, ಗ್ರಾಮ ಪಂಚಾಯಿತಿ ಸದಸ್ಯ ವಿಜು, ಸಹಾಯಿ ಮಿತ್ರ ಮಂಡಳಿಯ ನವೀನ್, ಇಂದಿರಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶೋಭಾ ಸತೀಶ್ ಹಾಜರಿದ್ದರು. ಶೌರ್ಯ ಪ್ರಶಸ್ತಿ ಪುರಸ್ಕøತ ಯೋಧ ಪೊನ್ನಂಪೇಟೆಯ ಹೆಚ್.ಎನ್. ಮಹೇಶ್ ಅವರನ್ನು ಸನ್ಮಾನಿಸಲಾಯಿತು.

ಕಡಂಗ: ದುಬೈ ಕರ್ನಾಟಕ ಕಲ್ಚರಲ್ ಫೌಂಡೇಶನ್ - ಕೆಸಿಎಫ್ ದುಬೈ ನಾರ್ತ್ ಝೋನ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಝೋನ್ ಅಧ್ಯಕ್ಷ ಇಸ್ಮಾಯಿಲ್ ಮದನಿ ನಗರ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ, ಕನ್ನಡ ಭಾಷಾ ಬೆಳವಣಿಗೆಯಲ್ಲಿ ಸಾಹಿತ್ಯ ನೀಡಿದ ಕೊಡುಗೆಯನ್ನು ನೆನಪಿಸಿದರು.

ಮುಖ್ಯ ಭಾಷಣ ಮಾಡಿದ ಸಂಘಟನಾ ಅಧ್ಯಕ್ಷ ರಿಯಾಝ್ ಕೊಂಡಂಗೇರಿ ಕನ್ನಡ ನಾಡಿನ ಸೌರ್ಹಾದತೆ ಮತ್ತು ಸಿರಿವಂತ ಪರಂಪರೆಯ ಬಗ್ಗೆ ಬೆಳಕು ಚೆಲ್ಲಿದರು. ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿ ಮುಸಾ ಹಾಜಿ ಬಸರ, ಅಬೂಬಕ್ಕರ್ ಹಾಜಿ ಕೊಟ್ಟಮುಡಿ, ರಫೀಕ್ ಚಾಮಿಯಾಲ್, ಹಮೀದ್ ಚಾಮಿಯಾಲ್, ಹುಸೈನ್ ಸತ್ತಿಕಲ್ ಮೊದಲಾದವರು ವೇದಿಕೆಯಲ್ಲಿದ್ದರು.

ಹಂಝ ಎಮ್ಮೆಮಾಡು ಸ್ವಾಗತಿಸಿ, ಅಬ್ದುಲ್ ಅಝೀಝ್ ಲತೀಫೀ ವಂದಿಸಿದರು.

ಸಂಪಾಜೆ: ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡಾಭಿಮಾನಿಗಳ ಸಹಯೋಗದಲ್ಲಿ ಸಂಪಾಜೆ ಗೇಟಿನ ಬಳಿಯಲ್ಲಿ ಕಸಾಪ ಸಂಪಾಜೆ ಘಟಕದ ಅಧ್ಯಕ್ಷ ಅನಂತ್ ಊರುಬೈಲು ಕನ್ನಡ ಧ್ವಜಾರೋಹಣ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಚೆದ್ಕಾರ್, ಸುಬ್ರಮಣ್ಯ ಉಪಾಧ್ಯಾಯ, ರಮಾನಂದ ಬಾಳಕಜೆ, ಬಾಲಕೃಷ್ಣ ನೆಡ್ಚಿಲ್, ದೇವಪ್ಪ ಕೊಯನಾಡು, ಬಿ.ಜೆ. ಯಶೋಧರ, ಶ್ರೀಧರ್ ಪಡ್ಪು, ಬಾಲಕೃಷ್ಣ ಬಾಳೆಹಿತ್ಲು, ಪುರುಷೋತ್ತಮ ಕುಂಬಾಡಿ, ಕನ್ನಡ ಸಾಹಿತ್ಯ ಪರಿಷತ್‍ನ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಆಟೋ ಚಾಲಕ ಮಾಲೀಕರ ಸಂಘದವರು, ಆರಕ್ಷಕ ಠಾಣೆ ಸಿಬ್ಬಂದಿ ವರ್ಗದವರು, ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಹಾಗೂ ಸಂಪಾಜೆ ಗ್ರಾಮಸ್ಥರು ಮತ್ತು ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.

ಸುಂಟಿಕೊಪ್ಪ: ಪ್ರತಿಯೊಬ್ಬರೂ ಕನ್ನಡ ನಾಡು, ನುಡಿಯ ರಕ್ಷಣೆಗೆ ಕಟಿಬದ್ಧರಾಗಿರಬೇಕು. ಕನ್ನಡ ಭಾಷೆಯನ್ನು ಇತರ ಭಾಷೆಯ ಜನರಿಗೂ ಕಲಿಸುವ ಮೂಲಕ ಭಾಷಾ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಉಪನ್ಯಾಸಕಿ ಪ್ರಮೀಳಾ ಹೇಳಿದರು.

ಸಮೀಪದ ಮಾದಾಪುರ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ಸಂಗೀತ, ನೃತ್ಯ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ನಿವೃತ್ತ ಕಚೇರಿ ಸಹಾಯಕಿ ಎಸ್.ಪಿ. ಮಾಲತಿ, ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಕನ್ನಡದ ಬಗ್ಗೆ ಗೌರವ, ಶ್ರದ್ಧಾಭಕ್ತಿಯನ್ನು ಎಲ್ಲರೂ ಹೊಂದಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಸಿ.ಜಿ. ಮಂದಪ್ಪ ವಹಿಸಿದ್ದರು. ಗರಗಂದೂರು ಕಾಫಿ ಬೆಳೆಗಾರರಾದ ವೇದಾವತಿ, ಕಾಲೇಜಿನ ಆಡಳಿತ ಮಂಡಳಿ ಸದಸ್ಯೆ ಸೀತಾ ಚಿಟ್ಟಿಯಪ್ಪ ಇದ್ದರು. ನಂತರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕುಶಾಲನಗರದ ಕಲಾವಿದ ರವಿ ಮತ್ತು ತಂಡದವರಿಂದ ಕನ್ನಡ ಗೀತಗಾಯನ, ನೃತ್ಯ ಕಾರ್ಯಕ್ರಮಗಳು ನಡೆದವು.ಮೂರ್ನಾಡು: ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ 64ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಡ್ಡಂಡ ಕಾರ್ಯಪ್ಪ ಹಾಗೂ ಅನಿತಾ ಕಾರ್ಯಪ್ಪ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ಪುಟಾಣಿ ಮಕ್ಕಳಿಗೆ ಬಯಲಿನಲ್ಲಿ ಆಟವಾಡಲು ಪರಿಕರಗಳನ್ನು ಅಳವಡಿಸಲು ಧನ ಸಹಾಯ ಮಾಡಿದ ದಾನಿಗಳನ್ನು ವಿದ್ಯಾಸಂಸ್ಥೆಯ ಪರವಾಗಿ ಗೌರವಿಸಲಾಯಿತು. ಈ ಹಿಂದೆ ಮೂರ್ನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳಾಗಿದ್ದ ದಿ. ಚೌರೀರ ಪೆಮ್ಮಯ್ಯ ಬಳಸುತ್ತಿದ್ದ ಕಾರ್ ಅನ್ನು ಮೂರ್ನಾಡು ವಿದ್ಯಾಸಂಸ್ಥೆಗೆ ದಾನವಾಗಿ ನೀಡಿದ ಅವರ ಕುಟುಂಬದವರನ್ನು ಕೂಡ ಗೌರವಿಸಲಾಯಿತು. ವಿವಿಧ ರೀತಿಯಲ್ಲಿ ಧನ ಸಹಾಯ ಮಾಡಿದವರು ಗೌರವಕ್ಕೆ ಪಾತ್ರರಾದರು.

ಕನ್ನಡ ರಾಜ್ಯೋತ್ಸವದ ದಿನದ ಮಹತ್ವವನ್ನು ಪದವಿ ಕಾಲೇಜಿನ ಉಪನ್ಯಾಸಕಿ ಕಲ್ಪನಾ ತಿಳಿಸಿಕೊಟ್ಟಿದಲ್ಲದೆ ವಿದ್ಯಾರ್ಥಿಗಳು ಕೂಡ ದಿನದ ಮಹತ್ವವನ್ನು ಪರಿಚಯಿಸಿದರು. ವಿದ್ಯಾಸಂಸ್ಥೆಯ ಎಲ್ಲಾ ವಿಭಾಗಗಳಲ್ಲೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಅಡ್ಡಂಡ ಕಾರ್ಯಪ್ಪ ತಮ್ಮ ಭಾಷಣದಲ್ಲಿ ಕನ್ನಡ ಅಳಿವಿನ ಅಂಚಿನಲ್ಲಿದೆ. ಪ್ರತಿಯೊಬ್ಬರು ಕೂಡ ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. 2000 ವರ್ಷ ಇತಿಹಾಸ ಹೊಂದಿರುವ ಕನ್ನಡ ನಮ್ಮ ಹೃದಯದ ಭಾಷೆ. ಇತರ ಭಾಷೆಗಳನ್ನು ಕಲಿಯುವ ಬದಲು ಕರ್ನಾಟಕದಲ್ಲಿ ನೆಲಸಿರುವ ಬೇರೆ ಭಾಷಿಗರಿಗೆ ನಮ್ಮ ಕನ್ನಡವನ್ನು ಕಲಿಸುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಅಧ್ಯಕ್ಷ ಬಾಚೇಟ್ಟಿರ ಮಾದಪ್ಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ, ಕನ್ನಡದ ಉಳಿವು, ಬೆಳವಿನ ಬಗ್ಗೆ ಪ್ರತಿಯೊಬ್ಬರೂ ಚಿಂತಿಸಬೇಕು ಹಾಗೂ ಕಾರ್ಯರೂಪಕ್ಕೆ ತರಬೇಕು ಎಂದು ಕಿವಿಮಾತು ಹೇಳಿದರು.

ಸಂಸ್ಥೆಯ ವಿವಿಧ ವಿಭಾಗಗಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನಿರೂಪಣೆಯನ್ನು ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ದಮಯಂತಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮೂರ್ನಾಡು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ವಿವಿಧ ವಿಭಾಗದ ಮುಖ್ಯಸ್ಥರು ಎಲ್ಲಾ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ನೆರೆದಿದ್ದರು. ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.

ವೀರಾಜಪೇಟೆ: 64ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವೀರಾಜಪೇಟೆಯ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ನೃತ್ಯ ಸ್ಪರ್ಧೆ ಹಾಗೂ ಛದ್ಮವೇಷ ಸ್ಪರ್ಧೆಯಲ್ಲಿ ಕಾವೇರಿ ಶಾಲೆಯ ವಿದ್ಯಾರ್ಥಿನಿಯರು ಭಾಗವಹಿಸಿ ವಿಜೇತರಾಗಿದ್ದಾರೆ.

ವೀರಾಜಪೇಟೆಯ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಸಾಮೂಹಿಕ ನೃತ್ಯ ಸ್ಪರ್ಧೆಯಲ್ಲಿ ಇಲ್ಲಿನ ಕಾವೇರಿ ಶಾಲೆಯ ವಿದ್ಯಾರ್ಥಿನಿಯರು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಛದ್ಮವೇಷ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯಾದ ಬಿ.ಎಸ್. ವರ್ಷಿಣಿ ತೃತೀಯ ಸ್ಥಾನ ಪಡೆದಿದ್ದಾರೆ.

ಮಡಿಕೇರಿ: ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸೇವೆಗಾಗಿ ಕಸ್ತೂರಿ ಗೋವಿಂದಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.

ಕರಿಕೆ: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಮೂಹಿಕ ನಾಡಗೀತೆ ಹಾಡಲಾಯಿತು. ವಿದ್ಯಾರ್ಥಿಗಳಿಂದ ದಿನದ ಮಹತ್ವದ ಕುರಿತು ಭಾಷಣ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಮುಖ್ಯ ಶಿಕ್ಷಕ ಎನ್.ಎಸ್. ಕುಮಾರ್ ಕನ್ನಡ ನಾಡು - ನುಡಿಯ ಬಗ್ಗೆ ತಿಳಿಸಿದರು. ಸಮಾರಂಭದಲ್ಲಿ ಶಿಕ್ಷಕರುಗಳಾದ ಭರಮಪ್ಪ ಪಾಷಾಗಾರ್, ಮಹಾಲಕ್ಷ್ಮಿ, ಗಣೇಶಾಚಾರಿ, ಮಧುರಾ, ಕಾವ್ಯ ಉಪಸ್ಥಿತರಿದ್ದರು.

ತಾಳತ್ತಮನೆ: ನೇತಾಜಿ ಯುವತಿ ಮಂಡಲಿ ತಾಳತ್ತಮನೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಅಧ್ಯಕ್ಷೆ ಬಿ.ಎ. ಮಂಜುಳಾ ಸ್ವಾಗತಿಸಿದರು. ಧ್ವಜಾರೋಹಣ ಕಾರ್ಯಕ್ರಮವನ್ನು ಜಿಲ್ಲಾ ಸಿವಿಲ್ ನ್ಯಾಯಾಲಯದ ನೌಕರರಾದ ಸುನಂದ ನೆರವೇರಿಸಿ ಮಾತನಾಡಿ, ಕನ್ನಡನಾಡು, ನುಡಿ ಹಾಗೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ನುಡಿದರು. ಕಾರ್ಯದರ್ಶಿ ಬಿ.ಎ. ದೇವಕಿ ವಂದಿಸಿದರು. ನಾಡಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಗೋಣಿಕೊಪ್ಪ ವರದಿ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಪಿ.ಯು. ಕಾಲೇಜುವಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥೇಯ ಕಾಲೇಜು ವಿದ್ಯಾರ್ಥಿಗಳಿಗೆ ಭಾವಗೀತೆ ಮತ್ತು ಜಾನಪದ ಗೀತೆ ಸ್ಪರ್ಧೆ ನಡೆಯಿತು.

ಭಾವಗೀತೆ ಸ್ಪರ್ಧೆಯಲ್ಲಿ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಪಿ.ಯು. ಕಾಲೇಜುವಿನ ಅಪರ್ಣ ಭಾರಧ್ವಜ್ ಪ್ರಥಮ, ಟಿ.ಯು. ಮಹಿತ್ ದ್ವಿತೀಯ, ಜಾನಪದ ಗೀತೆ ಸ್ಪರ್ಧೆಯಲ್ಲಿ ಶೃದ್ಧಾ ಶಾಸ್ತ್ರಿ - ಸಿ.ಎಸ್. ದೇವಿಕಾ ಪ್ರಥಮ, ಟಿ.ಯು. ಮಹಿತಾ ದ್ವಿತೀಯ ಸ್ಥಾನ ಪಡೆದುಕೊಂಡರು.

ಕನ್ನಡ ಭಾಷೆಯ ಇತಿಹಾಸದ ಬಗ್ಗೆ ವೀರಾಜಪೇಟೆ ಕಾವೇರಿ ಕಾಲೇಜು ಉಪನ್ಯಾಸಕಿ ಮುಲ್ಲೇಂಗಡ ರೇವತಿ ಪೂವಯ್ಯ ವಿಚಾರ ಮಂಡನೆ ಮಾಡಿದರು. ಹೆತ್ತ ತಾಯಿಗೆ ಕೊಡುವಂತ ಗೌರವವನ್ನು ಮಾತೃ ಭಾಷೆಗೂ ಕೂಡ ಕೊಡುವಂತಾಗಬೇಕು. ಮಾತನಾಡುವಾಗ ಹೆಚ್ಚು ಕನ್ನಡ ಬಳಕೆಗೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಅವರು ಹೇಳಿದರು.

ಈ ಸಂದರ್ಭ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಂಶುಪಾಲೆ ಕವಿತಾ, ಪಿ.ಯು. ವಿಭಾಗದ ಪ್ರಾಂಶುಪಾಲೆ ಡಾ. ಸಣ್ಣುವಂಡ ರೋಹಿಣಿ ತಿಮ್ಮಯ್ಯ, ಕೊಡವ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಚೆರಿಯಪಂಡ ರಾಜಾ ನಂಜಪ್ಪ ಉಪಸ್ಥಿತರಿದ್ದರು.