ಶನಿವಾರಸಂತೆ, ನ. 9: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳೂರು ಗ್ರಾಮದ ಕಾರ್ಮಿಕ ಮಹಿಳಾ ಕ್ರೀಡಾಪಟು ಕಮಲಮ್ಮ ಹಾಗೂ ಪುತ್ರ ಮೈಸೂರು ವಿಶ್ವವಿದ್ಯಾನಿಲಯದ ಅಥ್ಲೆಟಿಕ್ಸ್ ಕೋಚ್ ಟಿ.ಎಸ್.ರವಿ ತಾಳೂರು ಮಂಗಳೂರಿನ ವಿಶ್ವವಿದ್ಯಾಲಯದ ಮಂಗಳಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಹಿರಿಯರ ಕ್ರೀಡಾ ಕೂಟದಲ್ಲಿ ಸಾಧನೆ ತೋರಿ ಬೆಳ್ಳಿ ಹಾಗೂ ಚಿನ್ನದ 6 ಪದಕ ಗಳಿಸಿದ್ದಾರೆ.
ಕಾರ್ಮಿಕ ಮಹಿಳೆ ಕಮಲಮ್ಮ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ್ದು 50 ವರ್ಷಕ್ಕೆ ಮೇಲ್ಪಟ್ಟ ಹಿರಿಯರ ಕ್ರೀಡಾ ಕೂಟದಲ್ಲಿ 200, 400 ಹಾಗೂ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಸ್ಪರ್ಧಿಸಿ ದ್ವಿತೀಯ ಸ್ಥಾನ ಗಳಿಸಿ 3 ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ.
ಇವರ ಪುತ್ರ ಮೈಸೂರು ವಿಶ್ವವಿದ್ಯಾನಿಲಯದ ಅಥ್ಲೆಟಿಕ್ಸ್ ಕೋಚ್ ಟಿ.ಎಸ್.ರವಿ ತಾಳೂರು ಅವರು ಮೈಸೂರನ್ನು ಪ್ರತಿನಿಧಿಸಿದ್ದು 40 ವರ್ಷಕ್ಕೆ ಮೇಲ್ಪಟ್ಟ ಹಿರಿಯರ ಕ್ರೀಡಾ ಕೂಟದಲ್ಲಿ ಲಾಂಗ್ ಜಂಪ್ ಮತ್ತು ಹೈಜಂಪ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ 2 ಚಿನ್ನದ ಪದಕ ಹಾಗೂ 200 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ 1 ಬೆಳ್ಳಿ ಪದಕ ಪಡೆದಿದ್ದಾರೆ.
ಇವರಿಬ್ಬರು 2020ರ ಫೆಬ್ರವರಿ ಯಲ್ಲಿ ಗುಜರಾತಿನ ವಡೋದರದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಆ ಕ್ರೀಡಾ ಕೂಟದಲ್ಲೂ ಪದಕಗಳನ್ನು ಗಳಿಸುವ ಗುರಿಯನ್ನು ಹೊಂದಿ ಅಚಲ ವಿಶ್ವಾಸ ವ್ಯಕ್ತಪಡಿಸುತ್ತಾರೆ.ಮುಂದೆ ಜಪಾನಿನ ಟೊಕಿಯೋದ ಕುವಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ ಆಶಯವನ್ನು ಹೊಂದಿದ್ದಾರೆ.ಅದಕ್ಕಾಗಿ ನಿರಂತರ ಅಭ್ಯಾಸದಲ್ಲಿ ತೊಡಗಿದ್ದಾರೆ.
ಆರ್ಥಿಕ ತೊಂದರೆ: ಕಾರ್ಮಿಕ ಮಹಿಳೆ ಕಮಲಮ್ಮ ಹಾಗೂ ಪುತ್ರ ರವಿ ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ದಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆಲ್ಲುವ ಹುಮ್ಮಸ್ಸಿನ ಲ್ಲಿದ್ದರೂ ಆರ್ಥಿಕ ತೊಂದರೆ ಇವರನ್ನು ಕಾಡುತ್ತಿದೆ. ಯಾರಾದರೂ ದಾನಿಗಳು ಔದಾರ್ಯ ತೋರಿ ಧನಸಹಾಯ ನೀಡಿದರೆ ಗ್ರಾಮೀಣ ಪ್ರದೇಶದ ಕ್ರೀಡಾಪಟು ಗಳಾದ ಈ ತಾಯಿ-ಮಗ ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಯಶಸ್ಸು ಗಳಿಸುವದರಲ್ಲಿ ಸಂಶಯವಿಲ್ಲ. -ನರೇಶ್