ಸೋಮವಾರಪೇಟೆ, ನ.9: ಸಮೀಪದ ತಾಕೇರಿ ಗ್ರಾಮದಲ್ಲಿ ರಾತ್ರಿ ವೇಳೆ ಕಳ್ಳರು ದೊಡ್ಡಿಯೊಳಗಿದ್ದ ದನಗಳನ್ನು ಕಳವು ಮಾಡಲು ಯತ್ನಿಸುತ್ತಿದ್ದು, ಈ ಬಗ್ಗೆ ಗಮನಹರಿಸಬೇಕೆಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಗ್ರಾಮದ ಎಂ.ಕೆ. ಅಪ್ಪಯ್ಯ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿದ್ದ ದನಗಳನ್ನು, ರಾತ್ರಿ 8.30ರ ಸುಮಾರಿಗೆ ವ್ಯಕ್ತಿಯೋರ್ವ ಕಳವು ಮಾಡಲು ಯತ್ನಿಸಿದ್ದು, ಈ ಸಂದರ್ಭ ಅಪ್ಪಯ್ಯ ಟಾರ್ಚ್ ಬೆಳಕನ್ನು ಹರಿಸಿದಾಗ ಕೊಟ್ಟಿಗೆಯೊಳಗಿಂದ ಆರೋಪಿ ಪರಾರಿಯಾಗಿದ್ದಾನೆ.

ಕಪ್ಪು ಬಣ್ಣದ ಜರ್ಕಿನ್ ಧರಿಸಿದ್ದ ವ್ಯಕ್ತಿ ಈ ಕೃತ್ಯ ಎಸಗಿದ್ದು, ಪೊಲೀಸರು ತಕ್ಷಣ ಈ ಬಗ್ಗೆ ಗಮನಹರಿಸಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ತಾಕೇರಿ ಸೇರಿದಂತೆ ಸುತ್ತಮುತ್ತ ಗ್ರಾಮೀಣ ಭಾಗದಲ್ಲಿ ಜಾನುವಾರುಗಳ ಕಳವಿಗೆ ಯತ್ನ ನಡೆಯುತ್ತಲೇ ಇದೆ. ಇದೀಗ ಕೊಟ್ಟಿಗೆಯೊಳಗೆ ಬಂದು ದನಗಳನ್ನು ಕದಿಯಲು ಯತ್ನಿಸಲಾಗುತ್ತಿದೆ. ಪೊಲೀಸರು ಅನುಮಾನಾಸ್ಪದ ವಾಹನ, ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಬೇಕು ಎಂದು ಕಾಫಿ ಬೆಳೆಗಾರರ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಎಂ.ಸಿ. ಮುದ್ದಪ್ಪ ಆಗ್ರಹಿಸಿದ್ದಾರೆ.