ಗೋಣಿಕೊಪ್ಪ, ನ. 8: ವಾಣಿಜ್ಯ ನಗರ ಗೋಣಿಕೊಪ್ಪ ಕಸದ ಕೊಂಪೆಯಾಗಿ ಮಾರ್ಪ ಡುತ್ತಿದ್ದಂತೆಯೇ ಎಲ್ಲೆಂದರಲ್ಲಿ ಕಸದ ರಾಶಿಗಳು ರಾರಾಜಿಸುತ್ತಿದ್ದವು. ತ್ಯಾಜ್ಯದ ರಾಶಿಗಳು ಮೂಟೆ ಮೂಟೆಯಲ್ಲಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬದ ಅಡಿಯಲ್ಲಿ ಸಂಗ್ರಹವಾಗುತ್ತಿದ್ದವು. ನಗರದ ಕಸ ವಲ್ಲದೆ ವಿವಿಧ ಭಾಗದ ಕಸದ ರಾಶಿಗಳು ಗೋಣಿಕೊಪ್ಪಲು ವಿನಲ್ಲಿ ಸುರಿಯಲಾಗುತ್ತಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು ಗಾಡ ನಿದ್ರೆಯಿಂದ ಇನ್ನು ಕೂಡ ಹೊರ ಬಂದಿರಲಿಲ್ಲ. ಮಾರ್ಕೆಟ್ ವ್ಯಾಪ್ತಿಯಲ್ಲಿ ಹಣ್ಣಿನ ಅಂಗಡಿ ಮುಂದೆ, ತರಕಾರಿ ಅಂಗಡಿ ಮುಂದೆ ರಾಶಿ ರಾಶಿ ಕಸಗಳು ಮೂಟೆಯಲ್ಲಿ ತುಂಬಿಸಿಡ ಲಾಗಿತ್ತು. ಈ ಕಸಗಳು ಕೊಳೆತು ನಾರುತ್ತಿದ್ದು ಸೊಳ್ಳೆ, ನೊಣಗಳು ಹೆಚ್ಚಾಗಿದ್ದವು. ಮೂಗು ಮುಚ್ಚಿಕೊಂಡೆ ಸಾರ್ವಜನಿಕರು ಓಡಾಡುವ ಪರಿಸ್ಥಿತಿ ಸಾಮಾನ್ಯವಾಗಿತ್ತು.
ಸದಸ್ಯರ ಹೊಂದಾಣಿಕೆ ಕೊರತೆಯಿಂದ ಕಸ ವಿಲೇವಾರಿಗೆ ವಿಘ್ನಗಳೇ ಎದುರಾಗುತ್ತಿದ್ದವು. ತಮ್ಮ ಪ್ರತಿಷ್ಠೆಗಳೇ (ಮೊದಲ ಪುಟದಿಂದ) ಮುಂದಿಟ್ಟುಕೊಂಡು ಕೆಲ ಸದಸ್ಯರು ಕಸ ವಿಲೇವಾರಿಗೆ ಕಗ್ಗಂಟಾಗಿದ್ದರು. ಬೈಪಾಸ್ ರಸ್ತೆಯ ಎಡ ಭಾಗದಲ್ಲಿ ರಾಶಿ ರಾಶಿ ಕಸ ಸುರಿದಿರು ವದರಿಂದ ಈ ಮಾರ್ಗವಾಗಿ ಸಾರ್ವಜನಿಕರು ಸಂಚರಿಸಲು ಸಾಧ್ಯವೇ ಆಗುತ್ತಿರಲಿಲ್ಲ.
ಕಸ ವಿಲೇವಾರಿಯಲ್ಲಿ ನಿರುತ್ಸಾಹ ತೋರಿರುವದರಿಂದ ನಗರವನ್ನು ಸ್ವಚ್ಛವಾಗಿ ಕಾಪಾಡುವ ಹಿತದೃಷ್ಟಿಯಿಂದ ಸ್ಥಳೀಯ ಚೇಂಬರ್ ಆಫ್ ಕಾಮರ್ಸ್‍ನ ಪದಾಧಿಕಾರಿಗಳು ಹಲವು ಸುತ್ತು ಸಭೆಗಳನ್ನು ನಡೆಸಿ ಕಸ ವಿಲೇವಾರಿಗೆ ಶಾಶ್ವತ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ಆರಂಭಿಸಿದ್ದರು. ಪಂಚಾಯ್ತಿ ಅಭಿವೃದ್ಧಿ ಸಮಿತಿಯು ಹಲವು ಸಭೆಗಳನ್ನು ನಡೆಸಿ ಕಸ ವಿಲೇವಾರಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿತ್ತು. ಆದರೆ ಕಸ ಸಮಸ್ಯೆ ಕಗ್ಗಂಟ್ಟಾಗಿ ಉಳಿದಿತ್ತು. ಕಳೆದ ಎರಡು ತಿಂಗಳ ಹಿಂದೆ ಪಂಚಾಯ್ತಿಗೆ ನೂತನವಾಗಿ ಆಗಮಿಸಿದ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಕಸ ವಿಲೇವಾರಿ ವಿಷಯದಲ್ಲಿ ಪಂಚಾಯ್ತಿ ಸಿಬ್ಬಂದಿಗಳ ಸಹಕಾರ ಪಡೆದು ಕಸ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಆರಂಭಿಸಿದರು. ಮುಂಜಾನೆಯೇ ಪಂಚಾಯ್ತಿ ಸಿಬ್ಬಂದಿಗಳು ಕಸ ವಿಲೇವಾರಿ ವಿಷಯದಲ್ಲಿ ಕೆಲಸ ಆರಂಭಿಸಿದರು.
ಹಸಿ ಕಸ, ಒಣ ಕಸ ಬೇರ್ಪಡಿಸಿ ನೀಡಲು ನಾಗರಿಕರಿಗೆ ವ್ಯಾಪಕ ಪ್ರಚಾರ ಮಾಡುವ ಮೂಲಕ ಪಂಚಾಯ್ತಿ ವತಿಯಿಂದ ಚೀಲಗಳನ್ನು ನೀಡಿ ಜನತೆಗೆ ಅರಿವು ಮೂಡಿಸಲಾಯಿತು. ಆದರೂ ಸಮಸ್ಯೆ ಅಷ್ಟು ಸುಲಭವಾಗಿ ಬಗೆ ಹರಿಯಲಿಲ್ಲ. ದೃತಿಗೆಡದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಪೌರ ಕಾರ್ಮಿಕರ ಸಹಕಾರದಿಂದ ಪ್ರತಿನಿತ್ಯ ಸಂಗ್ರಹವಾಗುವ ಒಣ ಕಸವನ್ನು ಪಂಚಾಯ್ತಿಯ ಹಳೆಯ ಕಟ್ಟಡದಲ್ಲಿ ಸಂಗ್ರಹಿಸಿ ಈಗಾಗಲೇ ಎರಡು ಲಾರಿ ಒಣ ಕಸವನ್ನು ಮಾರಾಟ ಮಾಡಿದ್ದಾರೆ. ದಿನನಿತ್ಯ ಇಬ್ಬರು ಪೌರ ಕಾರ್ಮಿಕರನ್ನು ಕಸವನ್ನು ಬೇರ್ಪಡಿಸಲು ನಿಯೋಜನೆ ಮಾಡಿದ್ದಾರೆ.