ಮಡಿಕೇರಿ, ನ. 8 : ಬಾಬರಿ ಮಸೀದಿ ಹಾಗೂ ರಾಮ ಜನ್ಮಭೂಮಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಯಾರ ಪರವಾಗಿ ಹೊರಬಿದ್ದರೂ ಅದನ್ನು ಸ್ವಾಗತಿಸಿ ಗೌರವಿಸಬೇಕು ಎಂದು ಕೊಡಗು ಜಿಲ್ಲಾ ಖಾಝಿಯೂ ಆಗಿರುವ ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮುಸ್ಲಿಮರಿಗೆ ಕರೆ ನೀಡಿದ್ದಾರೆ.ಒಂದು ವೇಳೆ ಸುಪ್ರೀಂ ಕೋರ್ಟ್ ತೀರ್ಪು ಮುಸ್ಲಿಂಮರಿಗೆ ವಿರುದ್ಧವಾಗಿ ಹೊರ ಬಿದ್ದರೂ ಮುಸ್ಲಿಂ ಬಾಂಧವರು ಯಾವದೇ ಸಂಘರ್ಷಕ್ಕೆ ಇಳಿಯ ಕೂಡದು. ನ್ಯಾಯಾಲಯದ ತೀರ್ಪನ್ನು ಈ ದೇಶದ ಎಲ್ಲ ಪ್ರಜೆಗಳು ಗೌರವಿಸಬೇಕು ಎಂದಿರುವ ಎ.ಪಿ. ಉಸ್ತಾದ್, ಅಯೋಧ್ಯೆ ವಿವಾದದಲ್ಲಿ ಮುಖ್ಯವಾಗಿ ಮುಸ್ಲಿಮರ ಮುಂದೆ ಎರಡು ಅಂಶಗಳಿವೆ ಎಂದಿದ್ದಾರೆ. ಒಂದು ಮಸೀದಿಯ ಸಂರಕ್ಷಣೆ ಮತ್ತೊಂದು ದೇಶದ ಸಂರಕ್ಷಣೆ ಇದರಲ್ಲಿ ನಾವು ದೇಶದ ಸಂರಕ್ಷಣೆಗೆ ಆದ್ಯತೆಯನ್ನು ನೀಡಬೇಕು. ದೇಶ ಉಳಿದರೆ ಮಸೀದಿ ನಿರ್ಮಿಸಬಹುದು. ಆದುದರಿಂದ ನ್ಯಾಯಾಲಯದ ತೀರ್ಪು ಪರವಾಗಿ
(ಮೊದಲ ಪುಟದಿಂದ) ಬಂದರೂ ವಿರುದ್ಧವಾಗಿ ಬಂದರೂ ಮುಸ್ಲಿಂ ಬಾಂಧವರು ಮಿಸುಕಾಡಬಾರದು ಎಂದು ಅವರು ಕರೆಯಿತ್ತಿದ್ದಾರೆ.
ಶಾಂತಿ ಕಾಪಾಡಲು ಶಹೀದ್ ಮನವಿ
ಸುಪ್ರೀಂ ಕೋರ್ಟ್‍ನಲ್ಲಿ ಅಯೋಧ್ಯೆ ವಿವಾದದ ಅಂತಿಮ ತೀರ್ಪು ಸಧ್ಯದಲ್ಲಿಯೇ ಹೊರಬೀಳಲಿದ್ದು, ಸಾರ್ವಜನಿಕರು ತೀರ್ಪಿನ ಪರ ಅಥವಾ ವಿರುದ್ಧ ಹೇಳಿಕೆಗಳನ್ನು ನೀಡದೆ ಶಾಂತಿ-ಸೌಹಾರ್ದತೆಯನ್ನು ಕಾಪಾಡಬೇಕೆಂದು ಕೊಡಗು ಜಿಲ್ಲಾ ಕೆಪಿಸಿಸಿ ವೀಕ್ಷಕ ಟಿ.ಎಂ.ಶಹೀದ್ ತೆಕ್ಕಿಲ್ ಮನವಿ ಮಾಡಿದ್ದಾರೆ.
1992ರ ಡಿಸೆಂಬರ್‍ನಲ್ಲಿ ಸಂಭವಿಸಿದ ದುರ್ಘಟನೆಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸುವ ಮೂಲಕ ಜನರು ಸಾಮರಸ್ಯದ ಜೀವನ ನಡೆಸಬೇಕು ಎಂದು ಪತ್ರಿಕಾ ಹೇಳಿಕೆ ನೀಡಿರುವ ಅವರು ಕರಾಳದಿನ ಅಥವಾ ವಿಜಯೋತ್ಸವವನ್ನು ಆಚರಿಸಬಾರದೆಂದು ಕೋರಿದ್ದಾರೆ.