ಮಡಿಕೇರಿ, ನ. 8: ಬೆಂಗಳೂರಿನ ಮಿಂಟೊ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿದ ಕರವೇ ಕಾರ್ಯಕರ್ತರ ಬಂಧನಕ್ಕೆ ಆಗ್ರಹಿಸಿ ಇಂದು ರಾಜ್ಯವ್ಯಾಪಿ ಕರೆ ನೀಡಲಾಗಿದ್ದ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ವಿಭಾಗ (ಒಪಿಡಿ) ಬಂದ್ ಪ್ರತಿಭಟನೆಯ ಬಿಸಿ ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬಾರಲಿಲ್ಲ. ಜಿಲ್ಲೆಯ ಬಹುತೇಕ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿವೆ. ಕೆಲವೊಂದು ಆಸ್ಪತ್ರೆಗಳಲ್ಲಿ ಮಾತ್ರ ತುರ್ತು ಅವಶ್ಯಕತೆಗಳನ್ನು ಮಾತ್ರ ಪರಿಗಣಿಸಲಾಗಿತ್ತು. ವೈದ್ಯರ ಮೇಲಿನ ಹಲ್ಲೆ ಆರೋಪದಂತೆ ಕರವೇ ಕಾರ್ಯಕರ್ತರು ಶರಣಾಗತರಾದ ಹಿನ್ನೆಲೆಯಲ್ಲಿ ಬಂದ್‍ನ ಬಿಸಿ ಅಷ್ಟಾಗಿ ತಟ್ಟಲಿಲ್ಲ. ಖಾಸಗಿ ಆಸ್ಪತ್ರೆಗಳ ಪ್ರತಿಭಟನೆಯ ಕರೆಯ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಮೂಲಕ ಸರಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ನಿಗಾವಹಿಸಲಾಗಿತ್ತು.

ಈ ಬಗ್ಗೆ ಎಲ್ಲಾ ವೈದ್ಯರುಗಳಿಗೆ ಸುತ್ತೋಲೆಯನ್ನು ನೀಡುವದರೊಂದಿಗೆ ರಜೆಯನ್ನು ರದ್ದುಪಡಿಸಲಾಗಿತ್ತು. 29 ಪ್ರಾಥಮಿಕ ಆರೋಗ್ಯ ಕೇಂದ್ರ, ಒಂದು ನಗರ ಆರೋಗ್ಯ ಕೇಂದ್ರ, 7 ಸಮುದಾಯ ಆರೋಗ್ಯ ಕೇಂದ್ರ, 2 ಸಾರ್ವಜನಿಕ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಅಗತ್ಯತೆಗಳತ್ತ ಗಮನ ಹರಿಸಲಾಗಿತ್ತು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.