ಕಣಿವೆ, ನ. 8 : ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕಬ್ಬಿನಗದ್ದೆ ಗಿರಿಜನಹಾಡಿಗೆ ಶುಕ್ರವಾರ ಸಂಜೆ ಗಿರಿಜನ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಮುತ್ತಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೂರು ವಂಚಿತ ನಿಂಗ ಮತ್ತು ಸುಶೀಲ ದಂಪತಿಗಳು ಸೇರಿದಂತೆ ಇನ್ನಿತರ ನಿವಾಸಿಗಳಿಗೆ ಮನೆಗಳನ್ನು ಕಟ್ಟಿಕೊಡಲು ಸೂಕ್ತ ಸ್ಥಳಾವಕಾಶದ ಕೊರತೆ ಇದೆ. ಹಂತ ಹಂತವಾಗಿ ಫಲಾನುಭವಿಗಳಿಗೆ ಮನೆಗಳನ್ನು ಕಟ್ಟಿಕೊಡಲಾಗುತ್ತದೆ ಎಂದು ಮುತ್ತಮ್ಮ ತಿಳಿಸಿದ್ದಾರೆ. ಹಾಡಿಯಲ್ಲಿ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಬೀದಿ ದೀಪದ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವದು. ಟೆಂಡರು ಪ್ರಕ್ರಿಯೆ ಇದ್ದುದರಿಂದ ಗಿರಿಜನ ನಿವಾಸಿಗಳಿಗೆ ವಿತರಿಸುವ ಜೆಕೆ ಫುಡ್ ವ್ಯವಸ್ಥೆ ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿದೆ. ಅದನ್ನು ಕೂಡಲೇ ವಿತರಿಸಲಾಗುವದು. ಅಂಗನವಾಡಿಯ ಮೂಲಕ ನೋಂದಾಯಿತ ಫಲಾನುಭವಿಗಳಿಗೆ ಪೌಷ್ಠಿಕ ಆಹಾರವನ್ನು ಕೊಡಲಾಗುತ್ತಿದೆ.

ಮಹಿಳೆಯರು ಅಂಗನವಾಡಿಗೆ ಬಂದು ತೆಗೆದುಕೊಳ್ಳಬೇಕಿದೆ ಎಂದು ಮುತ್ತಮ್ಮ ಹೇಳಿದರು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರೂ ಆದ ಗಿರಿಜನ ಮುಖಂಡ ಆರ್.ಕೆ.ಚಂದ್ರು ಮಾತನಾಡಿ, ನಿಂಗ ಮತ್ತು ಸುಶೀಲ ದಂಪತಿಗಳು ಬೇರೆಡೆ ಇದ್ದರು. ಈಗ ಇಲ್ಲಿಗೆ ಬಂದು ಕೆಲವು ವರ್ಷಗಳು ಕಳೆದಿವೆ. ಆದರೂ ಕೂಡ ಅವರಿಗೆ ಸ್ವಂತ ಸೂರು ನೀಡಲು ಅಧಿಕಾರಿಗಳನ್ನು ಒತ್ತಾಯಿಸ ಲಾಗುವದು. ಈಗ ಈ ದಂಪತಿಗಳು ವಾಸವಿರುವ ಮನೆಯ ಜಾಗ ಗಿರಿಜನ ಸಮುದಾಯದ ವನ್ನಿ ಎಂಬ ಬೇರೆ ವ್ಯಕ್ತಿಗೆ ಸೇರಿದ್ದಾಗಿದೆ. ಆ ಮನೆಯಲ್ಲಿ ನಿಂಗ ದಂಪತಿಗಳಿದ್ದಾರೆ. ವನ್ನಿ ಎಂಬವರನ್ನು ಪತ್ತೆ ಹಚ್ಚಿ ಅವರಿಂದ ನೋಟರಿ ಮೂಲಕ ನಿಂಗ ದಂಪತಿಗಳಿಗೆ ಐದು ಅಥವಾ ಹತ್ತು ಸೆಂಟು ಜಾಗವನ್ನು ಇಲಾಖೆಯ ಅಧಿಕಾರಿಗಳು ಕೊಡಮಾಡಬೇಕಿದೆ. ಹಾಡಿಯಲ್ಲಿ ಶುದ್ಧ ಕುಡಿವ ನೀರಿನ ವ್ಯವಸ್ಥೆ ಇದ್ದು ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸಬೇಕಿದೆ ಎಂದರು. ಅಂಗನವಾಡಿ ಮೂಲಕ ಸಾಧ್ಯವಾದಷ್ಟು ಮಂದಿಗೆ ಆಹಾರ ವಿತರಿಸುತ್ತಿದ್ದೇವೆ. ಯಾರೋ ನಮಗೆ ಆಗದವರು ನಮ್ಮ ಮೇಲೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆ ರಾಣಿ ಎಂಬವರು ಅಸಮಾಧಾನ ವ್ಯಕ್ತಪಡಿಸಿದರು.