ಕುಶಾಲನಗರ, ನ. 7: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸರಣಿ ವಾಹನ ಅಪಘಾತ ನಡೆದು ಕಾರಿನಲ್ಲಿದ್ದ ದಂಪತಿ ಅದೃಷ್ಟವಶಾತ್ ಪಾರಾದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಕುಶಾಲನಗರ ತಾವರೆಕೆರೆ ಬಳಿ ಮಡಿಕೇರಿಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರ್ಗೆ (ಕೆಎ.12.ಎಂಎ.1016) ಹಿಂದಿನಿಂದ ಲಾರಿಯೊಂದು (ಟಿಎನ್.34.ಪಿ.9038) ಡಿಕ್ಕಿಯಾದ ಹಿನ್ನೆಲೆಯಲ್ಲಿ ಕಾರು ಮುಂದೆ ಚಲಿಸುತ್ತಿದ್ದ ಸಾರಿಗೆ ಬಸ್ಗೆ ಅಪ್ಪಳಿಸಿದೆ.
ಮಡಿಕೇರಿ ಉದ್ಯಮಿ ರಾಜೇಶ್ ಎಂಬವರು ಪತ್ನಿಯೊಂದಿಗೆ ಮೈಸೂರಿಗೆ ತೆರಳುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ತಾವರೆಕೆರೆ ಬಳಿ ವಾಹನ ದಟ್ಟಣೆ ಅಧಿಕವಿದ್ದ ಸಂದರ್ಭ ನಿಧಾನವಾಗಿ ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ತಮಿಳುನಾಡು ನೋಂದಣಿ ಸಂಖ್ಯೆಯ ಬೋರ್ವೆಲ್ ಲಾರಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಇನ್ನೋವಾ ಕಾರು ಮುಂದೆ ಚಲಿಸುತ್ತಿದ್ದ ಸಾರಿಗೆ ಬಸ್ನ ಅಡಿಭಾಗಕ್ಕೆ ನುಗ್ಗಿ ಸಂಪೂರ್ಣ ಜಖಂಗೊಂಡಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದ ರಾಜೇಶ್ ದಂಪತಿ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕಾರು ತೀವ್ರ ಹಾನಿಗೊಳಗಾಗಿದೆ. ಅರ್ಧ ಗಂಟೆಗಳ ಕಾಲ ಹೆದ್ದಾರಿ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಕುಶಾಲನಗರ ಸಂಚಾರಿ ಪೆÇಲೀಸರು ಸಂಚಾರ ಸುಗಮಗೊಳಿಸಿ ಲಾರಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
 
						