ಶನಿವಾರಸಂತೆ, ನ. 7: ವಚನ ಸಾಹಿತ್ಯ, ಜಾತಿ, ವರ್ಗ, ವರ್ಣ ಮೀರಿ ಬೆಳೆದ ಸಾಮಾಜಿಕ ಪರಿಕಲ್ಪನೆಯಾಗಿದೆ ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಬೆಸೂರು-ನಿಲುವಾಗಿಲು ಗ್ರಾಮದ ಶ್ರೀಬಾಲ ತ್ರಿಪುರಸುಂದರಿ ಅಮ್ಮನವರ ದೇವಾಲಯದಲ್ಲಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ನಡೆದ ಶರಣ ಸಂಗಮ-ಸಂಸ್ಕøತಿ ದರ್ಶನ 3ನೇ ವಿಚಾರಗೋಷ್ಠಿಯ ಸಮಾರೋಪ ಹಾಗೂ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಬಸವ ತತ್ವ ಜಗತ್ತಿನ ಬೆಳಕಿನ ಪ್ರಭೆ. 12ನೇ ಶತಮಾನದಲ್ಲೇ ಬಸವಣ್ಣ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದ್ದು, ಅಂದು ಆರಂಭಗೊಂಡ ಸಾಮಾಜಿಕ ಕ್ರಾಂತಿಯ ಹೋರಾಟ ಇನ್ನೂ ಜೀವಂತವಾಗಿದೆ ಎಂದರು.

ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ವಚನ ಸಾಹಿತ್ಯ ಜನಸಾಮಾನ್ಯರ ಆಡುಭಾಷೆಯ ಸಾಹಿತ್ಯವಾಗಿದ್ದು, ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಬಂದರೆ ಸಮಾನತೆ ಮೂಡುತ್ತದೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟರಾಜು ಮಾತನಾಡಿ, ವಚನ ಸಾಹಿತ್ಯದಿಂದ ಸಾಮಾಜಿಕ ಬದಲಾವಣೆ ಸಾಧ್ಯ ಎಂದರು. ಮೈಸೂರಿನ ಸಾಹಿತಿ ಮೋಹನ್ ಪಾಳೇಗಾರ್ ಸಮಾರೋಪ ನುಡಿಯಾಡಿ, ವಚನಗಳು ವಿಶ್ವ ಸಾಹಿತ್ಯಕ್ಕೆ ಸರಿಸಾಟಿಯಾಗಿದ್ದು, ನಮ್ಮನ್ನು ವಿಶ್ವ ಮಾನತ್ವದೆಡೆಗೆ ಕರೆದೊಯ್ಯುತ್ತವೆ ಎಂದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿದರು. ಕಾರ್ಯಕ್ರಮ ಸಂಯೋಜನಾ ಸಮಿತಿ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷ ಎನ್.ಎಸ್. ರಾಜಶೇಖರ್, ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕೆ.ಬಿ. ಹಾಲಪ್ಪ, ಪ್ರಮುಖರಾದ ಕೆ.ಎನ್. ಸಂದೀಪ್, ಶ.ಗ. ನಯನತಾರಾ, ಮಮತಾ, ಎಸ್.ಎಸ್. ಸುರೇಶ್, ಎನ್.ಯು. ಈರಪ್ಪ, ಎನ್.ಎಂ. ಚಂದ್ರಶೇಖರ್, ವಿವಿಧ ಸಂಘ ಸಂಸ್ಥೆಗಳ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.