ಮಡಿಕೇರಿ, ನ. 7: ನಾಪೋಕ್ಲು ವಿನಲ್ಲಿ ಗ್ರಾ.ಪಂ. ವತಿಯಿಂದ ಹಿಂದೂ ರುದ್ರಭೂಮಿಯಲ್ಲಿ ಅಕ್ರಮ ಮರ ಹನನದೊಂದಿಗೆ; ಶವಸಂಸ್ಕಾರ ಮಾಡಿದ್ದ ಹೆಣಗಳ ಅಸ್ಥಿಪಂಜರಗಳನ್ನು ನಾಶಗೊಳಿಸಿ ಕಾನೂನು ಬಾಹಿರವಾಗಿ ಕಸವಿಲೇವಾರಿ ಘಟಕಕ್ಕೆ ಯತ್ನಿಸಿದ್ದು; ಭಾನುವಾರದೊಳಗೆ ಸಮಸ್ಯೆ ಇತ್ಯರ್ಥಗೊಳಿಸದಿದ್ದಲ್ಲಿ; ಸೋಮ ವಾರ (ತಾ.11) ನಾಪೋಕ್ಲು ಬಂದ್ ನಡೆಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವದು ಎಂದು ಜಿ.ಪಂ. ಸದಸ್ಯ ಮುರುಳಿ ಕರುಂಬಮ್ಮಯ್ಯ ಪ್ರಸ್ತಾಪಿಸಿದರು.
ಇಂದಿನ ಜಿ.ಪಂ. ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು; ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್‍ನಿಂದ ಯಾವದೇ ಅನುಮತಿಯಿಲ್ಲದೆ; ಕಾವೇರಿ ಹೊಳೆ ದಂಡೆಯ 20 ಮೀಟರ್ ಅಂತರದಲ್ಲಿ ಕಸವಿಲೇವಾರಿ ಘಟಕ ರೂಪಿಸಿರುವ ಗ್ರಾ.ಪಂ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಮೊಕದ್ದಮೆ ದಾಖಲಿಸಿರುವ ದಾಗಿ ನೆನಪಿಸಿದರು.
ಅಮಾಯಕ ಜನರ ಸಂಬಂಧಿಗಳ ಶವಗಳನ್ನು ಸಂಸ್ಕಾರ ಮಾಡಿದ್ದನ್ನು; ಹೊರ ತೆಗೆದು ನಾಶಗೊಳಿಸಿರುವ ಅಸ್ಥಿ ಪಂಜರಗಳನ್ನು ಮರಳಿ ಅದೇ ಜಾಗದಲ್ಲಿ ಹೂಳದಿದ್ದರೆ ತೀವ್ರ ರೀತಿಯ ಪ್ರತಿಭಟನೆ ಎದುರಿಸ ಬೇಕಾದೀತು ಎಂದು ಎಚ್ಚರಿಸಿದರು. ಇಂತಹ ಅಮಾನವೀಯ ಕೃತ್ಯವನ್ನು ಖಂಡಿಸುವದಾಗಿ ಹೇಳಿದ ವಿಪಕ್ಷ ಸದಸ್ಯರುಗಳಾದ ಕೆ.ಪಿ. ಚಂದ್ರಕಲಾ, ಪುಟ್ಟರಾಜು, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮೊದಲಾ ದವರು; ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.
ಕ್ರಮದ ಭರವಸೆ : ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಸೂಕ್ತ ಕ್ರಮದ ಭರವಸೆ ನೀಡಿದರೆ; ಈ ಪ್ರಕರಣ ಯಾರೇ ಎಸಗಿದ್ದರೂ ತಪ್ಪೆಂದು ಅಭಿಪ್ರಾಯ ವ್ಯಕ್ತಪಡಿಸಿದ ಜಿ.ಪಂ. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ, ಕಾನೂನಿನಂತೆ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಅಭಿವೃದ್ಧಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದು ಪ್ರಕಟಿಸಿದರು.
ರಾತ್ರಿ ಕಾರ್ಯಾಚರಣೆ : ಇದೀಗ ಸ್ಮಶಾನದ ಹೆಣಗಳ ಅಸ್ಥಿ ಪಂಜರ ನಾಶಗೊಳಿಸಲು ರಾತ್ರಿ ವೇಳೆ ಕಾರ್ಯಾಚರಣೆ ನಡೆಯುತ್ತಿದ್ದು; ಸ್ಮಶಾನದ ಗೇಟ್ ಕೂಡ ಕದ್ದೊಯ್ಯ ಲಾಗಿದೆ; ಅಲ್ಲಿದ್ದ ಬೆಲೆಬಾಳುವ ಮರಗಳ ನಾಶಗೊಳಿಸಲಾಗಿದೆ; ಈ ಸಂಬಂಧ ಕ್ರಮ ಜರುಗಿಸಲಾಗುವದು ಎಂದು ತಾ.ಪಂ. ಕಾರ್ಯನಿರ್ವ ಹಣಾಧಿಕಾರಿ ಲಕ್ಷ್ಮೀ ಭರವಸೆ ನೀಡಿದರು.
ರ್ಯಾಫ್ಟಿಂಗ್‍ಗೆ ಕಿರುಕುಳ: ದುಬಾರೆಯಲ್ಲಿ ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯು ಜನರಲ್ ತಿಮ್ಮಯ್ಯ ಅಕಾಡೆಮಿ ಸಹಯೋಗದಲ್ಲಿ ತರಬೇತಿಗೊಳಿಸಿರುವ ಮಂದಿಗೆ; ಪ್ರವಾಸೋದ್ಯಮ ಅಧಿಕಾರಿಗಳು ರ್ಯಾಫ್ಟಿಂಗ್‍ಗೆ ಅವಕಾಶ ನೀಡದೆ ಕಿರುಕುಳ ನೀಡುತ್ತಿರವದಾಗಿ ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಆರೋಪಿಸಿ ದರು. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಅಧ್ಯಕ್ಷರು ಉತ್ತರಿಸಿದರು.
ಎಲ್ಲವೂ ತನಿಖೆಯಾಗಲಿ : ಜಿ.ಪಂ. ಇಂಜಿನಿಯರ್ ಶ್ರೀಕಂಠಯ್ಯ ಖಾಸಗಿ ಕೋಟಕ್ ಮಹೇಂದ್ರ ಬ್ಯಾಂಕ್‍ನಲ್ಲಿ ಹಣ ಇಟ್ಟಿರುವದು ಅಪರಾಧವಾದರೆ; ಜಿಲ್ಲಾಧಿಕಾರಿ ಸಹಿತ ಇತರ ಇಲಾಖೆಗಳಿಂದಲೂ ಇದೇ ಬ್ಯಾಂಕ್‍ನಲ್ಲಿ ಹಣ ಹೂಡಿದ್ದು; ಇಂತಹ ಎಲ್ಲಾ ಇಲಾಖೆಗಳ ವಿರುದ್ಧ ತನಿಖೆಯಾಗಲಿ ಎಂದು ಸದಸ್ಯೆ ಕೆ.ಪಿ. ಚಂದ್ರಕಲಾ ಪಟ್ಟು ಹಿಡಿದರು. ಓರ್ವ ಅಧಿಕಾರಿ ವಿರುದ್ಧ ಧ್ವನಿಯೆತ್ತುವ ಬದಲಿಗೆ; ಎಲ್ಲಾ ಹಂತದ ಹಣ ವಾಹಿವಾಟು ಬಗ್ಗೆ ಜಿ.ಪಂ. ನಿಂದ ಸಿಓಡಿ ತನಿಖೆಗೆ ಶಿಫಾರಸ್ಸು ಮಾಡ ಬೇಕೆಂದು ಅವರು ಒತ್ತಾಯಿಸಿದರು.
ಸದನದಿಂದ ಹೊರಗೆ: ಆಡಳಿತ ಸದಸ್ಯರು ಸಿಓಡಿ ತನಿಖೆ ನಿರಾಕರಿಸಿದಲ್ಲದೆ; ಕೇವಲ ಶ್ರೀಕಂಠಯ್ಯ ವಿರುದ್ಧ ಕ್ರಮಕ್ಕೆ ಸಮ್ಮತಿಸಿದಾಗ; ವಿಪಕ್ಷದ ಶಿವು ಮಾದಪ್ಪ, ಬಿ.ಎನ್. ಪ್ರಥ್ಯು, ಸರಿತಾ ಪೂಣಚ್ಚ, ಪಂಕಜ, ಶ್ರೀಜಾ ಸಾಜಿ ಮೊದಲಾದವರು ಸದನದಿಂದ ಹೊರ ನಡೆದರೆ; ಪುಟ್ಟರಾಜು, ಕೆ.ಪಿ. ಚಂದ್ರಕಲಾ, ಕುಮುದಾ ಧರ್ಮಪ್ಪ ಮೊದಲಾದವರು ಕಲಾಪದಲ್ಲಿ ಮುಂದುವರಿದಿದ್ದು ಕಂಡು ಬಂತು.
ಜನಪರ ಯೋಜನೆ ಕಡೆ ಗಮನಹರಿಸಿ
ಈಗಾಗಲೇ ಮಳೆಗಾಲ ಅವಧಿ ಮುಗಿದಿರುವದರಿಂದ ಮುಂದಿನ ದಿನಗಳಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಾಣ, ಪರಿಹಾರ ವಿತರಣೆ, ಹೀಗೆ ಹಲವು ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಸೂಚಿಸಿದರು. ನಗರದ ಜಿ.ಪಂ.ನೂತನ ಭವನದಲ್ಲಿ ಇಂದು ನಡೆದ ಜಿ.ಪಂ.ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿ.ಪಂ.ನೂತನ ಕಟ್ಟಡದಲ್ಲಿ ಪ್ರಥಮ ಸಾಮಾನ್ಯ ಸಭೆ ನಡೆದಿದೆ. ಹೊಸ ಜನಪರ ಯೋಜನೆಗಳು, ಕಾರ್ಯಕ್ರಮಗಳನ್ನು ತಲುಪಿಸುವತ್ತ ಗಮನಹರಿಸಬೇಕಿದೆ ಎಂದು ಅಧ್ಯಕ್ಷರು ಹೇಳಿದರು. ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಶಿಷ್ಯ ವೇತನ ಮಂಜೂರು, ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವದು ಹೀಗೆ ಹಲವು ಕಾರ್ಯ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಇನ್ನೂ ಸಹ ವಸತಿ ಹಾಗೂ ನಿವೇಶನ ರಹಿತರು ಸಾಕಷ್ಟು ಬುಡಕಟ್ಟು ಕುಟುಂಬಗಳಿದ್ದು, ಈ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಡುವಲ್ಲಿ ಮುಂದಾಗಬೇಕಿದೆ. ಆ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿ ಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ಸಮಾಜ ಕಲ್ಯಾಣ, ಐಟಿಡಿಪಿ ಹಾಗೂ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಸಮುದಾಯ ಭವನಗಳು ಸಾರ್ವಜನಿಕರ ಉಪಯೋಗಕ್ಕೆ ಬರಬೇಕು. ವೀರಾಜಪೇಟೆ ತಾಲೂಕಿನ ಆರ್ಜಿ ಸೇರಿದಂತೆ ಮತ್ತಿತರ ಕಡೆ ವಾಲ್ಮೀಕಿ ಸಮುದಾಯ ಭವನ ಬಳಕೆಯಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ವಾಲ್ಮೀಕಿ ಭವನ ಕಾಡು ಪಾಲು
ಈ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಅಚ್ಚಪಂಡ ಎಂ.ಮಹೇಶ್ ಆರ್ಜಿ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಸಮುದಾಯ ಭವನ ಸುತ್ತ ಗಿಡಗಂಟೆಗಳು ಬೆಳೆದು ಹಾವು, ಚೇಳು ಸೇರುವಂತಾಗಿದೆ. ಈ ರೀತಿಯಾದರೆ ಹೇಗೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಐಟಿಡಿಪಿ ಇಲಾಖೆಯ ಅಧಿಕಾರಿ ಶಿವಕುಮಾರ್ ಆರ್ಜಿ ಗ್ರಾಮದ ವಾಲ್ಮೀಕಿ ಸಮುದಾಯ ಭವನವನ್ನು ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವದು ಎಂದು ಹೇಳಿದರು.
ಹೈಸೊಡ್ಲೂರು ಗ್ರಾಮ ವ್ಯಾಪ್ತಿಯಲ್ಲಿ ಜಾಗ ಒತ್ತುವರಿ ಮಾಡಿಕೊಂಡಿದ್ದು, ಇದನ್ನು ತೆರವುಗೊಳಿಸಿ ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಸದಸ್ಯೆ ಶ್ರೀಜಾ ಸಾಜಿ ಒತ್ತಾಯಿಸಿದರು. ಶಾಲೆಗಳಿಗೆ ಅಗತ್ಯ ಪೀಠೋಪಕರಣ ಪೂರೈಕೆ ಮಾಡುವದು, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ನಿರ್ಮಾಣವಾಗುತ್ತಿರುವ ಕಟ್ಟಡಗಳು ಕಳಪೆಯಿಂದ ಕೂಡಿವೆ ಎಂಬ ದೂರುಗಳು ಕೇಳಿ ಬರುತ್ತಿದ್ದು, ಅದನ್ನು ಸರಿಪಡಿಸುವಂತಾಗಬೇಕು ಎಂದು ಅಧ್ಯಕ್ಷರು ಸೂಚಿಸಿದರು.
ಶಾಲೆ ಜಾಗ ಅತಿಕ್ರಮಣ
ಭಾಗಮಂಡಲದ ಸರ್ಕಾರಿ ಶಾಲೆ ಆವರಣದಲ್ಲಿ ಎಂಟು ಎಕರೆ ಜಾಗ ಇತ್ತು, ಈಗ ಕೇವಲ 2 ಎಕರೆ ಮಾತ್ರ ಇದೆ. ಹೀಗೆ ಒತ್ತುವರಿ ಮಾಡಿ ಕೊಂಡಿರುವದನ್ನು ತೆರವುಗೊಳಿಸ ಬೇಕು. ಈ ಕೆಲಸವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಜಿ.ಪಂ.ಸದಸ್ಯೆ ಕವಿತಾ ಪ್ರಭಾಕರ್ ಹೇಳಿದರು.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ಪ್ರಕೃತಿ ವಿಕೋಪದಿಂದಾಗಿ ಹಲವು ಶಾಲೆಗಳು ಶೀತಲಗೊಂಡಿವೆ. ಇವುಗಳನ್ನು ಸರಿಪಡಿಸುವಂತಾಗಬೇಕು. ಈ ಸಂಬಂಧ ಕಡತಗಳನ್ನು ಅಧಿಕಾರಿಗಳು ಕಾಲಮಿತಿಯೊಳಗೆ ವಿಲೇವಾರಿ ಮಾಡುವಂತೆ ಹೇಳಿದರು. ಬೆಸೂರು ಸರ್ಕಾರಿ ಶಾಲೆ ಕಟ್ಟಡ ಧಾರಾಕಾರ ಮಳೆಯಿಂದಾಗಿ ಸೋರುತ್ತಿದೆ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಕಟ್ಟಡ ಸಂಪೂರ್ಣ ಕಳಪೆಯಾಗಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ ಎಂದು ಅವರು ಹೇಳಿದರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ ಮಾತನಾಡಿ, ಶಾಲೆಗಳಲ್ಲಿ ನಿರಾಶ್ರಿತರಿಗೆ ಸ್ಥಳಾವಕಾಶ ಮಾಡುತ್ತಿರುವದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತುಂಬಾ ತೊಂದರೆಯಾಗುತ್ತದೆ. ಆದ್ದರಿಂದ ಸಮುದಾಯ ಭವನಗಳು ಮತ್ತಿತರ ಕಡೆಗಳಲ್ಲಿ ಸಂತ್ರಸ್ತರಿಗೆ ಮುಂದಿನ ದಿನಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಅಧ್ಯಕ್ಷ ಬಿ.ಎ.ಹರೀಶ್ ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸದಿರಲು ದೇವರಲ್ಲಿ ಪ್ರಾರ್ಥಿಸೋಣ ಎಂದರು.
ವೈದ್ಯರ ಕೊರತೆ
ಜಿಲ್ಲೆಯಲ್ಲಿ 18 ತಜ್ಞ ವೈದ್ಯರ ಹುದ್ದೆಗಳು ಖಾಲಿ ಇದ್ದು, ವೈದ್ಯರ ನೇಮಕಕ್ಕೆ ಕಾಲ ಕಾಲಕ್ಕೆ ನೇರ ಸಂದರ್ಶನ ಆಹ್ವಾನಿಸಲಾಗುತ್ತಿದೆ. ಆದರೆ ತಜ್ಞ ವೈದ್ಯರು ಲಭ್ಯವಾಗುತ್ತಿಲ್ಲ ಎಂದು ಡಿಎಚ್‍ಒ ಡಾ.ಕೆ.ಮೋಹನ್ ಮಾಹಿತಿ ನೀಡಿದರು.
ಸದಸ್ಯರಾದ ಶಿವು ಮಾದಪ್ಪ ಅವರು ಮಾತನಾಡಿ ಕುಟ್ಟ ಸರ್ಕಾರಿ ಪ್ರೌಢಶಾಲೆ ಆಟದ ಮೈದಾನ ಜಾಗ ಸಿಇಒ ಅವರ ಹೆಸರಿನಲ್ಲಿದ್ದು, ಅದನ್ನು ಗ್ರಾಮ ಪಂಚಾಯಿತಿ ಹೆಸರಿಗೆ ವರ್ಗಾಯಿಸಲು ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ನೆಲೆ ಕಲ್ಪಿಸಿ
ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಅವರು ಮಾತನಾಡಿ ಬಸವನಹಳ್ಳಿ ಹಾಗೂ ಬ್ಯಾಡಗೊಟ್ಟದಲ್ಲಿ ಬಾಕಿ ಇರುವ ಮನೆಗಳನ್ನು ಕೂಡಲೇ ನಿರ್ಮಿಸಿ ಅರ್ಹರಿಗೆ ಹಸ್ತಾಂತರಿಸುವಂತೆ ಮನವಿ ಮಾಡಿದರು. ಸದಸ್ಯೆ ಎಂ.ಬಿ.ಸುನಿತಾ ಮಾತನಾಡಿ ಕಾವೇರಿ ನದಿ ಪಾತ್ರದ ದಡದಲ್ಲಿ ವಾಸಿಸುತ್ತಿದ್ದ ಜನರು ಪ್ರವಾಹಕ್ಕೆ ಸಿಲುಕಿ ನಿರಾಶ್ರಿತರಾಗಿದ್ದು, ಇಂದಿಗೂ ಸಹ ನೆಲ್ಲಿಹುದಿಕೇರಿ ಸರ್ಕಾರಿ ಶಾಲೆಯ ಪರಿಹಾರ ಕೇಂದ್ರದಲ್ಲಿದ್ದಾರೆ. ಇವರಿಗೆ ಕೂಡಲೇ ಶಾಶ್ವತ ನೆಲೆ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಇಂದಿನ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ಅನುಪಾಲನಾ ವರದಿ ನೀಡಿದರು. ರಾತ್ರಿಯ ತನಕವೂ ಸಭೆ ಮುಂದುವರಿದಿತ್ತು.