ಕಣಿವೆ, ನ. 7: ಸರ್ಕಾರದ ಯಾವದೇ ಸವಲತ್ತುಗಳನ್ನು ಪಡೆಯದೇ ಕತ್ತಲ ಕೂಪದಲ್ಲಿ ಗಿರಿಜನ ಕುಟುಂಬ ಒಂದು ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಬ್ಬಿನಗದ್ದೆ ಜೇನುಕುರುಬರ ಹಾಡಿಯಲ್ಲಿದೆ. ಈ ಕುಟುಂಬದ ಬಗ್ಗೆ ಇದುವರೆಗೂ ಸಂಬಂಧಿತ ಗ್ರಾಮ ಪಂಚಾಯಿತಿಯಾಗಲೀ, ಸಮಾಜ ಕಲ್ಯಾಣ ಅಥವಾ ಗಿರಿಜನ ಕಲ್ಯಾಣ ಅಧಿಕಾರಿಗಳಿಗೆ ಮಾಹಿತಿ ಇಲ್ಲವೇ...? ಎನ್ನುವದು ಇಲ್ಲಿ ಪ್ರಮುಖ ಪ್ರಶ್ನೆಯಾಗಿದೆ. ಅಷ್ಟಕ್ಕೂ ಆ ಕುಟುಂಬದಲ್ಲಿ ವಯಸ್ಸಾದ ಗಂಡ ನಿಂಗ ಮತ್ತು ಹೆಂಡತಿ ಸುಶೀಲ ಇದ್ದಾರೆ. ನಿಂಗ ಎಂಬವರಿಗೆ ಅಂದಾಜು 65 ವಯಸ್ಸು, ಪತ್ನಿ ಸುಶೀಲ ಎಂಬವರಿಗೆ 60 ವಯಸ್ಸಿರಬಹುದು. ಈ ಅಮಾಯಕ ವೃದ್ಧ ದಂಪತಿಗಳಿಗೆ ಮಕ್ಕಳೇ ಇಲ್ಲ. ಇವರ ಬಳಿ ವಯಸ್ಸಿಗೆ ಸಂಬಂಧಿತ ದಾಖಲೆಗಳಾಗಲೀ, ವಾಸ ಸ್ಥಾನಕ್ಕೆ ಸಂಬಂಧಿಸಿದ ದಾಖಲೆಗಳೇ ಇಲ್ಲ. ಹಾಗಾಗಿ ಇವರಿಗೆ ಇದುವರೆಗೂ ಪಡಿತರ ಚೀಟಿಯಾಗಲೀ, ಮತದಾರರ ಚೀಟಿಯಾಗಲೀ, ಆಧಾರ್ ನೋಂದಣಿ ಪತ್ರವಾಗಲೀ ಯಾವದೂ ಕೂಡ ಇಲ್ಲ. ಇವರಿಗೆ ಸರ್ಕಾರ ನಿರ್ಗತಿಕರಿಗೆ ನೀಡುವ ಅನ್ನಭಾಗ್ಯ, ವೃದ್ಧಾಪ್ಯ ವೇತನ ಯಾವದೂ ಕೂಡ ದೊರಕಿಲ್ಲ. ಕಳೆದ ನಾಲ್ಕು ಐದು ವಸಂತಗಳಿಂದ ತೋಟಗಳಲ್ಲಿ ಕೂಲಿ ಮಾಡಿ ಜೀವನ ನಡೆಸಿರುವ ಈ ದಂಪತಿಗಳು ಈಗ ಕೂಲಿ ಮಾಡುವಷ್ಟು ಶಕ್ತಿ ಇಲ್ಲ. ಈಗ ಇವರನ್ನು ವೃದ್ಧ ದಂಪತಿಗಳ ಸಂಬಂಧಿ ರಾಣಿ ಎಂಬ ಕೂಲಿ ಕಾರ್ಮಿಕ ಮಹಿಳೆ ತಾನು ದುಡಿದು ಗಳಿಸಿದ ಹಣದಲ್ಲಿ ಸಾಕುತ್ತಿದ್ದಾಳೆ.
ಸ್ವಂತ ಸೂರು ಇಲ್ಲ
ಈ ವಯೋ ವೃದ್ಧ ದಂಪತಿಗಳಿಗೆ ಸ್ಥಳೀಯ ನಂಜರಾಯಪಟ್ಟಣ ಗ್ರಾಮ ಪಂಚಾಯತಿಯಾಗಲೀ, ಗಿರಿಜನ ಇಲಾಖೆಯಾಗಲೀ ಸೌಜನ್ಯಕ್ಕೂ ಮನೆಯನ್ನು ಕಟ್ಟಿ ಕೊಡದ ಕಾರಣ ಈ ದಂಪತಿಗಳು ಕಬ್ಬಿನಗದ್ದೆ ಹಾಡಿಯ ವನ್ನಿ ಎಂಬ ಮತ್ತೋರ್ವ ಜೇನುಕುರುಬ ನಿವಾಸಿಗೆ ಸೇರಿದ ಕಿತ್ತುನಿಂತ ಶಿಥಿಲಾವಸ್ಥೆಯ ಸೂರಿನಲ್ಲಿ ವಾಸವಿದ್ದಾರೆ. ಅದೂ ಆ ಮನೆಗೆ ಮೇಲ್ಛಾವಣಿಯಲ್ಲಿ ಅಳವಡಿಸಿದ ಎಸಿ ಶೀಟ್ ಗಳು ಮುರಿದು ಹೋಗಿದ್ದು ಮಳೆಯ ನೀರೆಲ್ಲಾ ಮನೆಯೊಳಗೆ ಸೋರುತ್ತಿದೆ. ಮಳೆ ಬರುವಾಗ ಮನೆಯೊಳಗೆ ಕೊಡೆಯನ್ನು ಹಿಡಿದೇ ಈ ದಂಪತಿಗಳು ಕೂರುತ್ತಾರೆ. ಮನೆಗೆ ವಿದ್ಯುತ್ ಸಂಪರ್ಕವೂ ಇಲ್ಲ. ಕುಡಿವ ನೀರು ಮೊದಲೇ ಇಲ್ಲ. ಬೀದಿ ದೀಪ ಉರಿದೇ ಇಲ್ಲ. ಅಳವಡಿಸಿದ ಸೋಲಾರ್ ದೀಪ ಹತ್ತಲೇ ಇಲ್ಲ. ಒಟ್ಟಿನಲ್ಲಿ ಇಲ್ಲಿ ಎಲ್ಲವೂ ಇಲ್ಲವಾಗಿದೆ.
ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಗೆ ಈ ಕಬ್ಬಿನಗದ್ದೆಯ ಜೇನುಕುರುಬರ ಕುಮಾರಿ ಎಂಬಾಕೆ ಚುನಾಯಿತರಾಗಿದ್ದು ಉಪಾಧ್ಯಕ್ಷೆಯೂ ಆಗಿದ್ದಾರೆ. ಆದರೆ ತನ್ನವರ ನೋವನ್ನೇ ಕೇಳದ ಈ ಉಪಾಧ್ಯಕ್ಷೆ ಇನ್ನೂ ಪಂಚಾಯತಿ ಕೆಲಸ ಕಾರ್ಯಗಳನ್ನು ಹೇಗೇ ನಿರ್ವಹಿಸುತ್ತಾರೋ ತಿಳಿಯದು ಎಂದು ಅದೇ ಹಾಡಿಯ ಮತ್ತೋರ್ವ ಕೂಲಿ ಕಾರ್ಮಿಕ ಮಹಿಳೆ ಅನಿತಾ ದೂರುತ್ತಾರೆ. ಇದೇ ಹಾಡಿಯಲ್ಲಿ 65 ಕ್ಕೂ ಹೆಚ್ಚು ಜೇನು ಕುರುಬರ ಕುಟುಂಬಗಳಿದ್ದು ಸರ್ಕಾರದಿಂದ ಪ್ರತಿ ತಿಂಗಳು ಉಚಿತವಾಗಿ ನೀಡುವ ಜೆಕೆ ಫುಡ್ ಅಂದರೆ ಗಿರಿಜನರ ಆರೋಗ್ಯದ ದೃಷ್ಟಿಯಿಂದ ಇಲಾಖೆ ವತಿಯಿಂದ ನೀಡುವ ಪೌಷ್ಠಿಕ ಆಹಾರದ ಕಿಟ್ ಕಳೆದ ಮೂರು ತಿಂಗಳಿಂದ ಸರಬರಾಜು ಆಗಿಲ್ಲ ಎಂದು ಹಾಡಿಯ ಮಂದಿ ದೂರಿದ್ದಾರೆ.
ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಅಂಗನವಾಡಿ ಮೂಲಕ ಜೇನು ಕುರುಬ ಕುಟುಂಬಗಳ ಗರ್ಭಿಣಿ ಹೆಂಗಸರು, ಹದಿ ಹರೆಯದ ಹೆಣ್ಣು ಮಕ್ಕಳು ಮತ್ತು ಬಾಣಂತಿಯರಿಗೆ ನೀಡುವ ಪೌಷ್ಟಿಕಾಂಶಗಳ ಸಾಮಗ್ರಿಗಳು ಕೂಡ ವಿತರಣೆ ಆಗಿಲ್ಲ ಎಂದು ಮಹಿಳೆಯರು ದೂರಿದ್ದಾರೆ. ಇನ್ನು ಈ ಹಾಡಿಯಲ್ಲಿ ಸಂಚಾರಿ ಆರೋಗ್ಯ ಇಲಾಖೆಯಿಂದ ಕಾಲ ಕಾಲಕ್ಕೆ ನೀಡಬೇಕಾದ ಆರೋಗ್ಯ ಶಿಬಿರ, ಮಹಿಳೆಯರು ಹಾಗೂ ಹೆಣ್ಣುಮಕ್ಕಳ ವಯುಕ್ತಿಕ ಸ್ವಚ್ಛತೆಯ ಅರಿವು ಸೇರಿದಂತೆ ನೈತಿಕ ಶಿಕ್ಷಣದ ಅರಿವು ಆಗುತ್ತಿಲ್ಲ. ಒಟ್ಟಾರೆ ಗಿರಿಜನರ ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರ ನೀಡುವ ಕೋಟಿ ಕೋಟಿ ರೂಪಾ ಯಿಗಳು ಏನಾಗುತ್ತಿವೆ? ಗಿರಿಜನರ ಹಿತ ಕಾಯಬೇಕಾದ ಅಧಿಕಾರಿಗಳು ಏನು ಮಾಡು ತ್ತಿದ್ದಾರೆ? ಚುನಾಯಿತ ಜನಪ್ರತಿ ನಿಧಿಗಳು ಏನು ಮಾಡುತ್ತಿದ್ದಾರೆ? ಎಂದು ಇಲ್ಲಿನ ಮಹಿಳೆಯರು ದೂರಿದ್ದಾರೆ. ಕೂಡಲೇ ಸೌಲಭ್ಯ ವಂಚಿತ ಬಡ ಕುಟುಂಬಗಳಿಗೆ ಸೌಲಭ್ಯವನ್ನು ನೀಡಲು ಇನ್ನಾದರೂ ಅಧಿಕಾರಿಗಳು ಮುಂದಾಗಬೇಕು. ಇಲ್ಲಿನ ಜಿ.ಪಂ. ಮತ್ತು ತಾ.ಪಂ. ಸದಸ್ಯರು ಕೂಡಲೇ ಹಾಡಿಗೆ ಭೇಟಿ ನೀಡಬೇಕು. ನಮ್ಮ ಅಹವಾಲನ್ನು ಆಲಿಸಬೇಕೆಂದು ಅನಿತಾ ಒತ್ತಾಯಿಸಿದ್ದಾರೆ. ಇದೇ ಹಾಡಿಯಲ್ಲಿ ಸಂಕಟದ ಜೀವನ ನಡೆಸುತ್ತಿರುವ ಸುರೇಂದ್ರ ಹಾಗೂ ಕುಮಾರಿ, ರಾಣಿ, ಮುತ್ತ ಅವರ ಕುಟುಂಬಗಳ ದುಸ್ತರದ ಬದುಕನ್ನು ಒಮ್ಮೆ ನೋಡಬೇಕು. ಕೂಡಲೇ ವಾಸದ ಮನೆಯೂ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸ ಬೇಕೆಂದು ಇಲ್ಲಿನ ಮತ್ತೋರ್ವ ಜೇನು ಕುರುಬರ ನಿವಾಸಿ ಮುತ್ತ ಆಗ್ರಹಿಸಿದ್ದಾರೆ.
- ಕೆ.ಎಸ್. ಮೂರ್ತಿ