ಮಡಿಕೇರಿ, ನ.7 : ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ನೀಡಲಾಗುವ ‘ಸಹಕಾರ ರತ್ನ’ ಪ್ರಶಸ್ತಿಗೆ ಈ ಬಾರಿ ಮಡಿಕೇರಿಯ ಮಂಡುವಂಡ ಪಿ.ಮುತ್ತಪ್ಪ ಹಾಗೂ ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿಗೆ ಸುಂಟಿಕೊಪ್ಪದ ಲೀಲಾ ಮೇದಪ್ಪ ಅವರುಗಳು ಆಯ್ಕೆಯಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ ಅವರು, ಸಹಕಾರ ಕ್ಷೇತ್ರದಲ್ಲಿ ಯಾವದೇ ಪ್ರತಿಫಲಾಪೇಕ್ಷೆಯಿಲ್ಲದೆ ಜನರ ಸೇವೆ ಮಾಡುತ್ತಿರುವ ಹಿರಿಯ ಸಹಕಾರಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲೇ ಪ್ರಥಮ ಎಂಬಂತೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮಾಡಿಕೊಂಡು ಬರುತ್ತಿದೆ. ಪ್ರಶಸ್ತಿಗೆ ಆಯ್ಕೆಯನ್ನು ಪಾರದರ್ಶಕವಾಗಿ ಹಾಗೂ ರಾಜಕೀಯ ರಹಿತವಾಗಿ ಮಾಡುವ ಉದ್ದೇಶದಿಂದ ಅದಕ್ಕಾಗಿ ಸಮಿತಿಯನ್ನೂ ರಚಿಸಲಾಗಿದೆ ಎಂದು ಹೇಳಿದರು.

ಈ ಬಾರಿಯ ಸಹಕಾರ ರತ್ನ ಪ್ರಶಸ್ತಿಗೆ ಹಿರಿಯ ಸಹಕಾರಿ, ಕಳೆದ 43 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಹಕಾರ ಯೂನಿಯನ್, ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್, ಮಡಿಕೇರಿ ತಾಲೂಕು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ, ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘ, ಕೊಡಗು ಜಿಲ್ಲಾ ಸಗಟು ಮಾರಾಟ ಸಹಕಾರ ಸ್ಟೋರ್ಸ್ (ಜನತಾ ಬಜಾರ್) ಕೊಡಗು ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕರಾಗಿ, ಕೊಡಗು ಸೌಹಾರ್ದ ಸಹಕಾರಿ ಸ್ಥಾಪಕ ಅಧ್ಯಕ್ಷರಾಗಿ, ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಹಾಗೂ ಈಗಲೂ ವಿವಿಧ ಸಹಕಾರ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಮಂಡುವಂಡ ಪಿ.ಮುತ್ತಪ್ಪ ಅವರನ್ನು ಸಮಿತಿ ಆಯ್ಕೆ ಮಾಡಿದೆ ಎಂದು ವಿವರಿಸಿದರು.

ಲೀಲಾ ಮೇದಪ್ಪ ಅವರು ಮಹಿಳಾ ಸಹಕಾರ ಕ್ಷೇತ್ರದಲ್ಲಿ ಕಳೆದ 26 ವರ್ಷಗಳಿಂದ ಸಕ್ರಿಯರಾಗಿದ್ದು, ಸುಂಟಿಕೊಪ್ಪ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ, ಸುಂಟಿಕೊಪ್ಪ ಪ್ಯಾಕ್ಸ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ನಿರ್ದೇಶಕರಾಗಿ ಕಳೆದ 20 ವರ್ಷಗಳಿಂದ ಮುಂದುವರಿಯುತ್ತಿದ್ದು, ಕೊಡಗು ಜಿಲ್ಲಾ ಹಾಪ್‍ಕಾಮ್ಸ್, ಕೊಡಗು ಜಿಲ್ಲಾ ಕಾಫಿ ಬೆಳೆಗಾರ ಸಹಕಾರ ಸಂಘ, ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ ನಿರ್ದೇಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

ಶ್ರೇಷ್ಠ ಸಹಕಾರಿ ಪ್ರಶಸ್ತಿ : ಜಿಲ್ಲೆಯ ಮೂರು ತಾಲೂಕುಗಳಿಂದ ತಲಾ ಒಬ್ಬರಿಗೆ ತಾಲೂಕು ಮಟ್ಟದ ಶ್ರೇಷ್ಠ ಸಹಕಾರಿ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಅದರಂತೆ ಮಡಿಕೇರಿ ತಾಲೂಕಿನಿಂದ ಸಂಪಾಜೆಯ ಬಲ್ಯಮನೆ ಎ.ಗಣಪತಿ, ವೀರಾಜಪೇಟೆ ತಾಲೂಕಿನಿಂದ ಕೆ.ಪಿ. ನಾಗರಾಜು ಹಾಗೂ ಸೋಮವಾರಪೇಟೆ ತಾಲೂಕಿನಿಂದ ಕೊಡ್ಲಿಪೇಟೆಯ ಬಿ.ಕೆ ಚಿಣ್ಣಪ್ಪ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಗಣಪತಿ ಅವರು 1972ರಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ನಾಗರಾಜ್ ಅವರು 1985ರಿಂದ ಹಾಗೂ ಬಿ.ಕೆ.ಚಿಣ್ಣಪ್ಪ ಅವರು 41 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿವಿಧ ಸಹಕಾರ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ನುಡಿದರು.

ಪ್ರಶಸ್ತಿಗೆ ಆಯ್ಕೆಯಾದವರಿಗೆ ನ.20ರಂದು ಮಡಿಕೇರಿಯ ಕೂರ್ಗ್ ಇಂಟರ್‍ನ್ಯಾಷನಲ್ ಹೊಟೇಲ್ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಹಯೋಗದಲ್ಲಿ ನಡೆಯಲಿರುವ ‘ಸಹಕಾರ ಸಂಸ್ಥೆಗಳ ಮೂಲ ಅರ್ಥಿಕ ಸೇರ್ಪಡೆ, ತಂತ್ರಜ್ಞಾನ ಅಳವಡಿಕೆ ಮತ್ತು ಗಣಕೀರಣ’ ವಿಷಯ ಕುರಿತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವದು ಎಂದು ಮನುಮುತ್ತಪ್ಪ ತಿಳಿಸಿದರು.

ಸಹಕಾರ ಸಪ್ತಾಹ: ಪ್ರತೀ ವರ್ಷದಂತೆ ಈ ಬಾರಿಯೂ 66ನೇ ವರ್ಷದ ಸಹಕಾರ ಸಪ್ತಾಹವನ್ನು ಜಿಲ್ಲೆಯ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದಲ್ಲಿ ಆಚರಿಸಲಾಗುತ್ತಿದ್ದು, ಈ ಬಾರಿ ‘ನವ ಭಾರತದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂಬ ಧ್ಯೇಯದಡಿಯಲ್ಲಿ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನವಾದ ನ.14ರಿಂದ ನ.20ರವರೆಗೆ ಸಹಕಾರ ಸಪ್ತಾಹ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ನುಡಿದರು.

ತಾ. 14ರಂದು ಚೆಟ್ಟಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ ‘ಗ್ರಾಮೀಣ ಸಹಕಾರ ಸಂಸ್ಥೆಗಳ ಮೂಲಕ ಅನ್ವೇಷಣೆ’ ಎಂಬ ವಿಷಯದಡಿ ನಡೆಯುವ ಕಾರ್ಯಕ್ರಮದೊಂದಿಗೆ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಲಾಗುತ್ತಿದ್ದು, ತಾ. 15ರಂದು ನಂಜರಾಯಪಟ್ಟಣ ಸಹಕಾರ ಸಂಘದಲ್ಲಿ ‘ಸಹಕಾರ ಸಂಸ್ಥೆಗಳಿಗಾಗಿ ಶಾಸನಾಧಿಕಾರ ರೂಪಿಸುವದು’ಎಂಬ ವಿಷಯದಡಿ, ತಾ. 16ರಂದು ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ‘ಸಹಕಾರ ಸಂಸ್ಥೆಗಳ ಯಶೋಗಾಥೆಗಳ ಮೂಲಕ ಸಹಕಾರ ಶಿಕ್ಷಣ, ತರಬೇತಿಯನ್ನು ಪುನರ್ ರೂಪಿಸುವದು’ಎಂಬ ವಿಷಯದಡಿ, ತಾ. 17ರಂದು ಹೊದ್ದೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ‘ಸಹಕಾರ ಸಂಸ್ಥೆಗಳ ನಡುವೆ ಸಹಕಾರ ಬಲಪಡಿಸುವದು’ ಎಂಬ ವಿಷಯದಡಿ, ತಾ. 18ರಂದು ಬಿರುನಾಣಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ‘ಸಹಕಾರ ಸಂಸ್ಥೆಗಳ ಮೂಲಕ ಸರಕಾರದ ಹೊಸ ಯೋಜನೆಗಳು’ಎಂಬ ವಿಷಯದಡಿ ಹಾಗೂ ನ.19ರಂದು ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ‘ಯುವಜನ, ಮಹಿಳಾ ಮತ್ತು ಅಬಲ ವರ್ಗಕ್ಕಾಗಿ ಸಹಕಾರ ಸಂಸ್ಥೆಗಳು’ಎಂಬ ವಿಷಯದಡಿ ಸಹಕಾರ ಸಪ್ತಾಹ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಕನ್ನಂಡ ಸಂಪತ್, ಪಟ್ಟಡ ಮನುರಾಮಚಂದ್ರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಹಾಗೂ ವ್ಯವಸ್ಥಾಪಕಿ ಮಂಜುಳಾ ಉಪಸ್ಥಿತರಿದ್ದರು.