ಭಾಗಮಂಡಲ, ನ. 7: ಚುನಾವಣೆಯ ನಂತರ ರಾಜಕಾರಣಿಗಳು ರಾಜಕೀಯವನ್ನು ಬಿಟ್ಟು ರೈತರ ಪರ ಹೋರಾಟ ಮಾಡುವ ಅನಿವಾರ್ಯತೆ ಇಂದು ಬಂದಿದೆ ಎಂದು ವಿಧಾನ ಪರಿಷತ್ತು ಸದಸ್ಯೆ ವೀಣಾ ಅಚ್ಚಯ್ಯ ಹೇಳಿದರು.
ಭಾಗಮಂಡಲದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಗ್ರಾಮೀಣ ಮಾರುಕಟ್ಟೆ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗಿನಲ್ಲಿ ಪ್ರತಿವರ್ಷ ಭೂಕುಸಿತಗಳು ಸಂಭವಿಸುತ್ತಿದ್ದು ಭೀಕರ ದುರಂತಗಳಿಂದಾಗಿ ಕೊಡಗಿನ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ. ರೈತರು ಬೆಳೆದ ಯಾವದೇ ಬೆಳೆ ಕೈಗೆ ಸಿಗದೆ ಜೀವನ ಕಷ್ಟಕರವಾಗಿದೆ. ಕೊಡಗಿನ ರೈತರು ಆರ್ಥಿಕವಾಗಿ ಕುಸಿದಿದ್ದು ಭೂಮಿಗಳನ್ನು ಪಾಳುಬಿಡುವಂತಹ ಸ್ಥಿತಿಗೆ ತಲಪಿದ್ದಾರೆ. ಕೊಡಗಿನ ಜನರ ಬದುಕು ಕೊಚ್ಚಿ ಹೋಗುವತ್ತ ಸಾಗುತ್ತಿದೆ. ಇಂದು ರಾಜಕೀಯ ಬಿಟ್ಟು ಎಲ್ಲರೂ ಒಂದಾಗಿ ಚರ್ಚಿಸಿ ಸರ್ಕಾರದ ಕಣ್ಣು ತೆರೆಸಬೇಕಿದೆ. ಜಿಲ್ಲೆಯ ಇತರ ಭಾಗಗಳಿಗಿಂತ ಭಾಗಮಂಡಲ ಜನರ ಬದುಕು ದುಸ್ಥಿತಿಗೆ ತಲಪಿದೆ ಎಂದರು. ಕಾರ್ಯಕ್ರಮಕ್ಕೂ ಮೊದಲು ಸಹಕಾರದ ಧ್ವಜಾರೋಹಣ ನೆರವೇರಿಸಿದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ.ಬಾಂಡ್ ಗಣಪತಿ ಮಾತನಾಡಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಅಪೆಕ್ಸ್ ಬ್ಯಾಂಕಿನಿಂದ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿರುವ ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘವು ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ದಕ್ಷ ಆಡಳಿತ ನಡೆಸಲು ಇಂದು ಅಧಿಕಾರಿಗಳಿಂದಾಗಿ ಕಷ್ಟಕರವಾಗುತ್ತಿದೆ. ಅಧಿಕಾರಿಗಳ ಹಸ್ತಕ್ಷೇಪದಿಂದಾಗಿ ಸಹಕಾರ ಸಂಘಗಳಲ್ಲಿ ದುಡಿಯುವದೇ ಕಷ್ಟಕರವಾಗುತ್ತಿದೆ. ರೈತರ ಸಾಲಮನ್ನಾ ಇನ್ನೂ ಮುಕ್ತಾಯದ ಹಂತದಲ್ಲಿದೆ. ಸಾಲಮನ್ನಾದ ಹಣ ಹಂತಹಂತವಾಗಿ ಬರುತ್ತಿದ್ದು, ಜಿಲ್ಲೆಯಲ್ಲಿ 446 ರೈತರ ಸಾಲವು ಆಧಾರ್ ಮತ್ತು ಪಡಿತರ ಚೀಟಿಗಳ ಲೋಪದಿಂದಾಗಿ ಬಾಕಿ ಉಳಿದಿದೆ ಎಂದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಕೆ.ಸತೀಶ್‍ಕುಮಾರ್ ಮಾತನಾಡಿ ಸ್ಥಳೀಯವಾಗಿ ರೈತರು ಬೆಳೆದಂತಹ ತಮ್ಮ ಉತ್ಪನ್ನಗಳನ್ನು ಒಂದೇ ಕಡೆಯಲ್ಲಿ ಮಾರಾಟ ಮಾಡುವ ಸಲುವಾಗಿ ಮುಂದಿನ ದಿನಗಳಲ್ಲಿ ರೈತರಿಗೆ ಉಪಯೋಗವಾಗುವಂತಹ ನಿಟ್ಟಿನಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಸಂಘದಿಂದ 30-40 ಲಕ್ಷ ಬಂಡವಾಳ ಹಾಕಿದ್ದು ನಬಾರ್ಡ್‍ನಿಂದ ರೂ. 10ಲಕ್ಷ ಮಂಜೂರಾಗಿದೆ. 3,50 ಲಕ್ಷ ಕಾಮಗಾರಿಗೆ ದೊರೆತಿದ್ದು ಇನ್ನೂ 6.50 ಲಕ್ಷ ಬಾಕಿ ಉಳಿದಿದೆ ಎಂದರು.
ಸಂಘದಲ್ಲಿ ಅವಿರತವಾಗಿ ಅತ್ಯುತ್ತಮವಾಗಿ ಸೇವೆಸಲ್ಲಿಸುತ್ತಿರುವ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ಕಲಾವತಿ ಅವರನ್ನು ಫಲತಾಂಬೂಲ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭ ನಬಾರ್ಡ್ ಬ್ಯಾಂಕಿನ ನಿವೃತ್ತ ಡಿಡಿಎಂ ಮುಂಡಂಡ ನಾಣಯ್ಯ, ಗುತ್ತಿಗೆದಾರರಾದ ಚಂದ್ರಪ್ರಕಾಶ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಕೇಟೋಳಿರ ಹರೀಶ್‍ಪೂವಯ್ಯ, ನಬಾರ್ಡ್ ಡಿಡಿಎಂ ಪಿ.ವಿ. ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎನ್.ಸುಬ್ರಮಣಿ, ಭಾಗಮಂಡಲ ಗ್ರಾಮಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ,ಕುಂದಚೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಣತ್ತಲೆ ಜಯಪ್ರಕಾಶ್, ಅಯ್ಯಂಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾವತಿ ಹಾಗೂ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು. ನಂಜುಂಡಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.