ಕೂಡಿಗೆ, ನ. ೨: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಗುಂದ ಗ್ರಾಮದಲ್ಲಿ ವಾಸಿಸುತ್ತಿರುವ ೩೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ನೀಡುವಂತೆ ಅಲ್ಲಿನ ನಿವಾಸಿಗಳು ಕಂದಾಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಕಳೆದ ೩೦ ವರ್ಷಗಳಿಂದ ಹಾರಂಗಿ ಅಣೆಕಟ್ಟೆ ನಿರ್ಮಾಣಗೊಳ್ಳುವ ಸಂದರ್ಭ ನಿವೇಶನ ರಹಿತರಿಗೆ ಈ ಜಾಗದಲ್ಲಿ ನಿವೇಶನಗಳನ್ನು ನೀಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಜಾಗದ ಯಾವದೇ ಹಕ್ಕು ಪತ್ರಗಳನ್ನು ನೀಡಿಲ್ಲ. ಇಲ್ಲಿನ ನಿವಾಸಿಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿದೀಪದ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ ಹಕ್ಕುಪತ್ರ ನೀಡುವಂತೆ ಯಾವದೇ ಸ್ಪಂದನೆ ದೊರಕಿಲ್ಲ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ.
ಈ ವ್ಯಾಪ್ತಿಯ ಗ್ರಾಮಸ್ಥರು ಸಭೆ ನಡೆಸಿ ಹಕ್ಕು ಪತ್ರ ಪಡೆಯುವ ಬಗ್ಗೆ ಮುಖ್ಯಮುಂತ್ರಿ ಯಡಿಯೂರಪ್ಪ ಅವರಿಗೆ ಶಾಸಕರ ಸಮ್ಮುಖದಲ್ಲಿ ಭೇಟಿ ಮಾಡಿ ಮನವಿ ಪತ್ರ ನೀಡಲು ತೀರ್ಮಾನಿಸಿದ್ದಾರೆ.