ಮಡಿಕೇರಿ, ನ. ೨: ಪ್ರವಾಸಿಗರನ್ನು ಕರೆದೊಯ್ಯಲು ಸರತಿಯಲ್ಲಿ ಮುಂದೆ ಬರುವ ನಿಟ್ಟಿನಲ್ಲಿ ಬಾಡಿಗೆ ಜೀಪುಗಳ ಪೈಪೋಟಿಯಿಂದಾಗಿ ನಿಯಂತ್ರಣ ಕಳೆದುಕೊಂಡ ಜೀಪುಗಳು ಪರಸ್ಪರ ಡಿಕ್ಕಿಯಾಗಿ ಒಂದು ಜೀಪು ರಸ್ತೆ ಬದಿಯಿರುವ ಮನೆಯಂಗಳಕ್ಕೆ ಜಿಗಿದರೆ ಮತ್ತೊಂದು ಜೀಪು ಇನ್ನೊಂದು ಮನೆಯ ಬಳಿಯ ಬೇಲಿಯೊಳಗೆ ನುಗ್ಗಿದೆ. ಪ್ರವಾಸಿ ತಾಣವಾಗಿರುವ ಮಾಂದಲ್‌ಪಟ್ಟಿಗೆ ತೆರಳುವ ರಸ್ತೆಯ ದೇವಸ್ತೂರುವಿನಲ್ಲಿ ಈ ಘಟನೆ ಸಂಭವಿಸಿದೆ.
ಇAದು ಬೆಳಿಗ್ಗೆ ೮ ಗಂಟೆ ವೇಳೆಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಎಂಎA ೫೪೦ ಜೀಪು (ಕೆಎ೦೯ ಎಂಇ ೩೨೭೨) ಹಾಗೂ ಮಹೀಂದ್ರ ಬೊಲೇರೊ (ಕೆಎ ೧೨ ಎನ್ ೮೨೯೧) ಜೀಪು ದೇವಸ್ತೂರು ಸೇತುವೆ ಬಳಿಯ ಇಳಿಜಾರು ರಸ್ತೆಯಲ್ಲಿ ಪರಸ್ಪರ ಜೀಪು ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಬೊಲೇರೊ ಜೀಪು ರಸ್ತೆ ಬದಿಯ ಕುಕ್ಕೇರ ರಾಮಯ್ಯ ಅವರ ಮನೆಯಂಗಳಕ್ಕೆ ನುಗ್ಗಿದೆ. ರಸ್ತೆಯಿಂದ ಸುಮಾರು ೫೦ ಅಡಿಗಳಷ್ಟು ಗುಂಡಿಗೆ ಇಳಿದ ಜೀಪು ಅಂಗಳದಲ್ಲಿ ರಾಶಿ ಹಾಕಲಾಗಿದ್ದ ಜಲ್ಲಿ ಕಲ್ಲುಗಳ ಗುಡ್ಡೆ ಮೇಲೇರಿ ನಿಂತಿದೆ. ಮತ್ತೊಂದು ೫೪೦ ಜೀಪು ರಸ್ತೆಯ ಇನ್ನೊಂದು ಬದಿಗೆ ಇಳಿದಿದ್ದು, ಕುಕ್ಕೇರ ಲಕ್ಷö್ಮಣ ಅವರ ಮನೆಯ ಬಳಿಯ ಬೇಲಿಯೊಳಗೆ ನುಗ್ಗಿ ಚರಂಡಿಯಲ್ಲಿ ಚಕ್ರಗಳು ಸಿಲುಕಿಕೊಂಡು ನಿಂತಿದೆ.
ತಪ್ಪಿದ ಅಪಾಯ: ಅವಘಡ ಕ್ಕೀಡಾದ ಎರಡೂ ಜೀಪುಗಳಲ್ಲೂ ಪ್ರವಾಸಿಗರಿದ್ದರೂ ಅದೃಷ್ಟವಶಾತ್ ಯಾರಿಗೂ ಯಾವದೇ ಗಾಯ ಗಳಾಗಿಲ್ಲ. ಅದಕ್ಕಿಂತ ಮಿಗಿಲಾಗಿ ರಾಮಯ್ಯ ಅವರ ಮನೆಯ ಅಂಗಳ ದಲ್ಲಿ ಮಕ್ಕಳು ಆಟವಾಡಿಕೊಂಡಿದ್ದರು. ಅವಘಡದ ಸದ್ದಿಗೆ ಹೆದರಿ ಓಡಿದ್ದಾರೆ. ಇಲ್ಲವಾದಲ್ಲಿ ಮಕ್ಕಳ ಮೇಲೆ ಜೀಪು ಹರಿಯುವ ಸಾಧ್ಯತೆಯಿತ್ತು. ಅದೂ ಅಲ್ಲದೆ ೮ ಗಂಟೆ ವೇಳೆಗೆ ಶಾಲಾ ಮಕ್ಕಳು ಬಸ್ಸಿಗಾಗಿ ದಾರಿ ಬದಿಯಲ್ಲಿ ಕಾಯುತ್ತಿರುತ್ತಾರೆ. ಅವಘಡವಾದ ಸ್ಥಳದಲ್ಲೂ ಜನರ ಓಡಾಟವಿರುತ್ತದೆ. ಇಂದು ಅದೃಷ್ಟವಶಾತ್ ಯಾರೂ ಇಲ್ಲದ್ದರಿಂದ ಪ್ರಾಣಾಪಾಯ ತಪ್ಪಿದಂತಾಗಿದೆ.
ಪೈಪೋಟಿ ಕಾರಣ : ಮಾಂದಲ್‌ಪಟ್ಟಿಗೆ ತೆರಳುವ ರಸ್ತೆಯ ನಂದಿಮೊಟ್ಟೆ ಎಂಬಲ್ಲಿAದ ಪ್ರವಾಸಿಗರನ್ನು ಕರೆದೊಯ್ಯಲು ೪೦ಕ್ಕೂ ಹೆಚ್ಚು ಜೀಪುಗಳು ಓಡಾಡುತ್ತವೆ. ಅನೇಕ ಮಂದಿ ಯುವಕರಿಗೆ ಇದರಿಂದಲೇ ಜೀವನ ಸಾಗಿಸಲು ಮಾರ್ಗವಾಗಿದೆ. ಆದರೆ ಅಹಿತಕರ ಪೈಪೋಟಿಯಿಂದಾಗಿ ಈ ರೀತಿಯ ಅವಘಡಗಳು ಸಂಭವಿಸುತ್ತದೆ. ಈ ಹಿಂದೆಯೂ ಅವಘಡವಾಗಿದ್ದಾಗ ಗ್ರಾಮಾಂತರ ಠಾಣಾಧಿಕಾರಿ ಜೀಪ್‌ಗಳ ಸಂಚಾರಕ್ಕೆ ಬ್ರೇಕ್ ಹಾಕಿದ್ದರು. ನಂತರದಲ್ಲಿ ಮತ್ತೆ ಅವಕಾಶ ನೀಡಲಾಯಿತು. ವೇಗಕ್ಕೆ ಕಡಿವಾಣ ಹಾಕಿ ಪೈಪೋಟಿಯಿಲ್ಲದೆ ಸರತಿಯನುಸಾರ ಸಂಚರಿಸುವAತೆ ಅನುಮತಿ ನೀಡಲಾಗಿತ್ತು. ಅದರಂತೆ ಇದೀಗ ಸರತಿಯಂತೆ ಒಂದಾದ ನಂತರ ಮತ್ತೊಂದು ಜೀಪು ಸಂಚರಿಸುತ್ತದೆ. ಆದರೆ ಪ್ರವಾಸಿಗರನ್ನು ಕರೆದೊಯ್ದು ವಾಪಸ್ ಕರೆತಂದು ಸರತಿಯಲ್ಲಿ ಮುನ್ನುಗ್ಗುವ ಸಲುವಾಗಿ ಚಾಲಕರು ಅತಿವೇಗದಲ್ಲಿ ಜೀಪ್ ಗಳನ್ನು ಓಡಿಸುತ್ತಾರೆ. ಇದರಿಂದಾಗಿ ಅವಘಡಗಳು ಸಂಭವಿಸುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ನಿಷೇಧಕ್ಕೆ ಆಗ್ರಹ : ಒಂದರ ಹಿಂದೆ ಒಂದರAತೆ ಜೀಪುಗಳು ಅತಿವೇಗದಲ್ಲಿ ಚಲಿಸುವದರಿಂದ ಸ್ಥಳೀಯರಿಗೆ ರಸ್ತೆ ಬದಿ ನಡೆದಾಡಲು ವಾಹನಗಳಲ್ಲಿ ತೆರಳಲು ಭಯವಾಗು ತ್ತದೆ. ಅಲ್ಲದೆ ಬೆಳಿಗ್ಗೆ, ಸಂಜೆ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಚಾಲಕರಂತೂ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದAತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಒಂದೋ ಜೀಪ್‌ಗಳ ಸಂಚಾರ ನಿಷೇಧಿಸಬೇಕು; ಇಲ್ಲವಾದಲ್ಲಿ ವೇಗಕ್ಕೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಾರೆ. ಪ್ರಸ್ತುತ ಮಾಂದಲ್‌ಪಟ್ಟಿ ಪ್ರವೇಶ ದ್ವಾರದವರೆಗೆ ರಸ್ತೆ ಸರಿ ಇದೆ. ಅಲ್ಲಿಯ ತನಕ ಪ್ರವಾಸಿಗರ ವಾಹನ ಸಂಚರಿಸಬಹುದಾಗಿದ್ದು, ಅಲ್ಲಿಂದ ಮುಂದಕ್ಕೆ ಜೀಪುಗಳಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ್ದ ಪೊಲೀಸ್ ಅಧಿಕಾರಿಗಳೊಂದಿಗೆ ಈ ಬಗ್ಗೆ ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಬೆಳಿಗ್ಗೆ ಪ್ರತಿಭಟನೆ ಕೂಡ ನಡೆಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರು, ಗ್ರಾಮಸ್ಥರೊಂದಿಗೆ ಮಾತನಾಡಿ ಎರಡೂ ಜೀಪ್‌ಗಳನ್ನು ಪೊಲೀಸ್ ಠಾಣೆಗೆ ಸ್ಥಳಾಂತರಿಸಿದರು.