ಮಡಿಕೇರಿ, ನ. ೨: ಮಡಿಕೇರಿಯ ತಿರಿಬೊಳ್ಚ್ ಕೊಡವ ಸಂಘ ಹಾಗೂ ಶ್ರೀ ಇಗ್ಗುತಪ್ಪ ಕೊಡವ ಕ್ಷೇಮಾಭಿವೃದ್ಧಿ ಸಂಘ, ವಿದ್ಯಾರಣ್ಯಪುರ ಬೆಂಗಳೂರು ಈ ಎರಡು ಸಂಘದ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಇಗ್ಗುತಪ್ಪ ಸಂಘದಲ್ಲಿ ಕೊಡವ ವಿವಾಹದಂತಹ ಪವಿತ್ರ ಕಾರ್ಯವು ಪದ್ಧತಿಯ ಚೌಕಟ್ಟಿನೊಳಗೆ ನಡೆಯಬೇಕೆಂಬ ಉದ್ದೇಶದಿಂದ ‘ಮಂಗಲತ್ ನೀರ್ ಎಡ್ಪಲ್ಲಿ ಮೂಡಿನ ತಡ್ತಿತ್ ಆಡುವೊ’ ಎಂಬ ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮ ಜರುಗಿತು.
ತಿರಿಬೊಳ್ಚ್ ಕೊಡವ ಸಂಘದ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಂಗಳೂರಿನ ಕೊಡವ ಸಮಾಜದ ಮಾಜಿ ಅಧ್ಯಕ್ಷ ಬೇರೆರ ಎಂ. ಶಂಭು ಅಯ್ಯಣ್ಣನವರು ಕೊಡವ ಮದುವೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮದ್ಯ ಬಳಕೆಯನ್ನು ನಿಷೇಧಿಸಬೇಕು, ಗಂಗಾಪೂಜೆ ಯಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಮದುವಣಗಿತ್ತಿ ಕನ್ಯೆಯನ್ನು ಹಿಂಸಿಸಿ ನೋಯಿಸುವದು ತರವಲ್ಲ ಎಂದು ನುಡಿದರು. ಸುಧಾರಣೆಗಾಗಿ ಶ್ರಮಿಸುತ್ತಿರುವ ತಿರಿಬೊಳ್ಚ್ ಸಂಘವನ್ನು ಶ್ಲಾಘಿಸಿ ತಮ್ಮ ಒತ್ತಾಸೆ ಎಂದಿಗೂ ಇರುವದಾಗಿ ಕಿವಿಮಾತು ಹೇಳಿದರು. ಮತ್ತೋರ್ವ ಅತಿಥಿ ಬಾಟ ಇಂಡಿಯಾ ಲಿಮಿಟೆಡ್ನ ಮಾಜಿ ಜನರಲ್ ಮ್ಯಾನೇಜರ್ ಚೇಮಿರ ಸಿ. ಪೊನ್ನಪ್ಪ ಮಾತನಾಡಿ, ತಿರಿಬೊಳ್ಚ್ ಕೊಡವ ಸಂಘದ ಹೋರಾಟಕ್ಕೆ ಈಗಾಗಲೇ ಫಲ ಸಿಗುತ್ತಿದೆ; ಹಲವಾರು ಕೊಡವ ಸಮಾಜಗಳಲ್ಲಿ ಮದ್ಯ ರಹಿತ ಮದುವೆ, ಗಂಗಾಪೂಜೆಗೆ ಸಮಯ ನಿಗದಿ, ಇದೆಲ್ಲವೂ ತಿರಿಬೊಳ್ಚ್ ಜಾಗೃತಿ ಕಾರ್ಯಕ್ರಮದ ಫಲಶ್ರುತಿ; ಈ ಹೋರಾಟಕ್ಕೆ ಎಲ್ಲರ ಬೆಂಬಲ ಅಗತ್ಯ ಎಂದರು. ಇಗ್ಗುತಪ್ಪ ಸಂಘದ ಅಧ್ಯಕ್ಷ ಮೂಕೊಂಡ ರಮೇಶ್ ಮಾತನಾಡಿದರು. ಬರಹಗಾರ್ತಿ ಮಲ್ಲೇಂಗಡ ಸುಧಾ ಮುತ್ತಣ್ಣ ಪ್ರಬಂಧ ಮಂಡನೆ ಮಾಡಿದರು. ನಂತರ ಡಾಟಿ ಪೂವಯ್ಯ ಸಂವಾದ ಕಾರ್ಯಕ್ರಮ ನಡೆಸಿದಾಗ ನೆರೆದಿದ್ದವರಿಂದ ಹಲವಾರು ಸಲಹೆ ಸೂಚನೆಗಳು ವ್ಯಕ್ತವಾದವು. ಸಲಹೆಗಾರರಾದ ಡಾ. ಉಳ್ಳಿಯಡ ಎಂ. ಪೂವಯ್ಯ ಸಮಾರೋಪ ಭಾಷಣ ಮಾಡಿದರು. ಕುಕ್ಕೆರ ಜಯಾ ಚಿಣ್ಣಪ್ಪ ತಪ್ಪಡ್ಕ ನಡೆಸಿದರು. ಕೂಪದಿರ ಜೂನಾ ವಿಜಯ್, ಬೊಟ್ಟೋಳಂಡ ನಿವ್ಯ ದೇವಯ್ಯ ಪ್ರಾರ್ಥಿಸಿ, ಚೇಮಿರ ಸಿ. ಮುತ್ತಣ್ಣ ವಂದಿಸಿದರು. ಕಾಳೇಂಗಡ ಸಾವಿತ್ರಿ ಮುತ್ತಪ್ಪ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ನಿಮಿತ್ತ ಹಲವಾರು ಪೈಪೋಟಿ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ನಡೆಯಿತು. ಪುಟ್ಟ ಬಾಲಕ ಇಟ್ಟೀರ ನಿಖಿಲ್ ನಾಚಪ್ಪ ಅವರ ಹಾಡುಗಾರಿಕೆ ಜನಮನ ರಂಜಿಸಿತು. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿದ್ದರು.