ಕೂಡಿಗೆ, ನ. ೨: ೨೦೧೮-೧೯ನೇ ಸಾಲಿನ ನಿವೇಶನ ರಹಿತ ಫಲಾನುಭವಿಗಳ ಪಟ್ಟಿಯನ್ನು ಒಂದು ವರ್ಷದ ಹಿಂದೆ ನಡೆದ ಮಾಸಿಕ ಸಭೆ ಮತ್ತು ಗ್ರಾಮಸಭೆಗಳಲ್ಲಿ ಆಯ್ಕೆ ಮಾಡಿ, ಅರ್ಹ ಫಲಾನುಭವಿಗಳಿಗೆ ದೊರಕಬೇಕಾದ ನಿವೇಶನ ಇನ್ನೂ ಬಾರದಂತಾಗಿದೆ. ಈ ವಿಷಯವಾಗಿ ಇಂದು ನಡೆದ ಕೂಡಿಗೆ ಗ್ರಾಮ ಪಂಚಾಯ್ತಿಯ ಮಾಸಿಕ ಸಭೆಯಲ್ಲಿ ತೀವ್ರವಾದ ಚರ್ಚೆಗಳು ನಡೆದವು.
ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಗುತ್ತಿದ್ದAತೆ ಗ್ರಾ.ಪಂ ಸದಸ್ಯ ಕೆ.ವೈ.ರವಿ ಸಭೆಯಲ್ಲಿ ಮಾಸಿಕ ಸಭೆಯಲ್ಲಿ ನಾವು ತೀರ್ಮಾನ ಕೈಗೊಂಡ ವಿಷಯಗಳು ಕಾರ್ಯಗತವಾಗುತ್ತಿಲ್ಲ. ಕಳೆದ ಒಂದು ವರ್ಷದಿಂದ ಈ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆ ಬಿದ್ದ ಪರಿಣಾಮ ಮಳೆಯಿಂದ ಮನೆಗಳು ಹಾನಿಯಾಗಿದ್ದು, ನಿವೇಶನ ರಹಿತರ ಪಟ್ಟಿಯನ್ನು ತಯಾರಿಸಿ ಕಳುಹಿಸಿದರೂ ಯಾವದೇ ಮನೆಗಳ ಪಟ್ಟಿ ಬಂದಿರುವದಿಲ್ಲ. ಇದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ದಿನಂಪ್ರತಿ ಗ್ರಾ.ಪಂ. ಕಚೇರಿಗೆ ಅಲೆದಾಡುವ ಪ್ರಸಂಗ ಎದುರಾಗಿದೆ. ಈ ಬಗ್ಗೆ ಯಾವ ರೀತಿಯ ಕ್ರಮಕೈಗೊಂಡಿದ್ದೀರಿ ಹಾಗೂ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಪ್ರಕ್ರಿಯೆ ನಡೆಯುತ್ತಿದೆಯೋ ಇಲ್ಲವೋ ಎಂದು ವಾಗ್ವಾದಕ್ಕಿಳಿದರು. ಇದಕ್ಕೆ ಉಳಿದ ಸದಸ್ಯರೂ ದನಿಗೂಡಿಸಿದರು.
ಸಭೆಯಲ್ಲಿ ಕುಡಿಯುವ ನೀರು ಯೋಜನೆಯಡಿಯಲ್ಲಿ ಹೆಬ್ಬಾಲೆಯಿಂದ ಮುಳ್ಳುಸೋಗೆವರೆಗೆ ಸರಬರಾಜಾಗುವ ನೀರು ಸಮರ್ಪಕವಾಗಿ ಶುದ್ಧೀಕರಣ ಗೊಳ್ಳುತ್ತಿಲ್ಲ.
ಅಲ್ಲದೆ, ಕೂಡಿಗೆಯ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ವ್ಯವಸ್ಥೆ ಮಾಡಿರುವ ಕುಡಿಯುವ ನೀರಿನ ಯೋಜನೆಯ ಬೋರ್‌ವೆಲ್ ನಲ್ಲಿಯೂ ಅಶುದ್ಧವಾದ ನೀರು ಬರುತ್ತಿರುವದರಿಂದ ಆರೋಗ್ಯ ಇಲಾಖೆಯವರು ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ತಿಳಿಸಿದರೂ ಸಹ ಅದೇ ನೀರನ್ನು ಕುಡಿಯಲು ಸರಬರಾಜು ಮಾಡುತ್ತಿರುವದು ಸರಿಯಲ್ಲ. ಈ ಬಗ್ಗೆ ಕ್ರಮಕೈಗೊಂಡು ಕುಡಿಯುವ ನೀರಿನ ವ್ಯವಸ್ಥೆಗೆ ಬದಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಆ ವಾರ್ಡಿನ ಸದಸ್ಯರಾದ ಕೃಷ್ಣ, ರವಿ, ರತ್ನಮ್ಮ ತಿಳಿಸಿದರು.
ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು. ಈಗಾಗಲೇ ತುಂಬಿರುವ ಕಸದ ತೊಟ್ಟಿಗಳನ್ನು ಶುಚಿಗೊಳಿಸ ಬೇಕು. ಹಾರಂಗಿ ನದಿಯ ಸೇತುವೆಯ ಸಮೀಪಕ್ಕೆ ಕಸವನ್ನು ಹಾಕುತ್ತಿರುವ ಅಂಗಡಿ ಮಾಲೀಕರಿಗೆ ಹಾಗೂ ಮನೆಯವರಿಗೆ ಎಚ್ಚರಿಕೆಯ ನೋಟೀಸ್ ನೀಡಬೇಕೆಂದು ಸದಸ್ಯರು ಒತ್ತಾಯಿಸಿದರು.
ಕಾಡಾನೆ ಹಾವಳಿ ಹೆಚ್ಚಾಗಿದ್ದು, ಸೀಗೆಹೊಸೂರು, ಭುವನಗಿರಿ, ಹುಣಸೇಪಾರೆ ವ್ಯಾಪ್ತಿಗಳಲ್ಲಿ ಬೀದಿದೀಪಗಳ ಅಳವಡಿಕೆ ಮತ್ತು ಕತ್ತಲು ಪ್ರದೇಶಗಳಲ್ಲಿಯೂ ಬಲ್ಬ್ಗಳನ್ನು ಅಳವಡಿಸುವಂತೆ ಆ ವಾರ್ಡಿನ ಸದಸ್ಯರಾದ ಟಿ.ಕೆ. ವಿಶ್ವನಾಥ್, ಮಂಜಯ್ಯ, ದಸ್ವಿ ಒತ್ತಾಯಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅವರು ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರ ಎಲ್ಲಾ ಅಭಿಪ್ರಾಯಗಳನ್ನು ಆಲಿಸಲಾಗಿದೆ. ಆದಷ್ಟು ಬೇಗ ಕಾರ್ಯಗತ ಗೊಳಿಸಲಾಗುವದು ಎಂದರು.
ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಶ್ವಿನಿ ಅವರು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಗಿರೀಶ್ ಹಾಗೂ ಸರ್ವ ಸದಸ್ಯರು ಇದ್ದರು.