ಮಡಿಕೇರಿ, ನ. ೨ : ಕನ್ನಡ ಚಲನ ಚಿತ್ರರಂಗದಲ್ಲಿ ಕೊಡಗಿನ ಹಲವಾರು ಬೆಡಗಿಯರು ತಾರೆಯರಾಗಿ ಗಮನ ಸೆಳೆದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಈ ಸಾಲಿಗೆ ಇನ್ನಷ್ಟು ಹೊಸ ಮುಖಗಳು ಸೇರ್ಪಡೆಯಾಗುವ ಮೂಲಕ ಮಿಂಚು ಹರಿಸುತ್ತಿದ್ದಾರೆ. ಚಿತ್ರರಂಗದ ಖ್ಯಾತ ನಾಯಕ ನಟರಾಗಿ ಗುರುತಿಸಿಕೊಂಡಿರುವ ಹಲವಾರು ಮೇರುನಟರೊಂದಿಗೆ ಕೊಡಗಿನ ಯುವತಿಯರು ನಾಯಕಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ನಟಿಯರಾದ ಪ್ರೇಮಾ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ಕೃಷಿ ಸೇರಿದಂತೆ ಪ್ರಸ್ತುತ ಬೇಡಿಕೆಯ ನಟಿಯಾಗಿ ಕನ್ನಡದೊಂದಿಗೆ, ತಮಿಳು, ತೆಲುಗು ಚಿತ್ರರಂಗದಲ್ಲೂ ಹೆಸರು ಮಾಡುತ್ತಿರುವ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರು ಚಿತ್ರರಂಗದಲ್ಲಿ ಹೆಸರು ಮಾಡಿರುವ ಕೊಡಗಿನ ತಾರೆಯರಾಗಿದ್ದಾರೆ.ಇದೀಗ ಮತ್ತೊಬ್ಬಳು ಈ ಚಂದನವನಕ್ಕೆ ‘ಎಂಟ್ರಿ’ ಕೊಡುತ್ತಿದ್ದಾಳೆ. ಜಿಲ್ಲೆಯವರಾದ ಉದ್ಯಮಿಗಳಾದ (ಹೈದರಾಬಾದ್ ಪರ್ಲ್ಸ್) ಚೇಂದAಡ ಬಬ್ಲು ತಿಮ್ಮಯ್ಯ ಹಾಗೂ ಬೀನಾ ದಂಪತಿಯ ಪುತ್ರಿ ತನ್ವಿ ಈ ಹೊಸ ಬೆಡಗಿ. ಈಕೆ ಇದೇ ಪ್ರಥಮ ಬಾರಿಗೆ ಚೊಚ್ಚಲ ಚಿತ್ರವೊಂದರಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ. ಅದೂ ಈಕೆಗೆ ದೊರೆತ ಅವಕಾಶ ಬಹುಬೇಡಿಕೆಯ ನಟರಾಗಿರುವ

(ಮೊದಲ ಪುಟದಿಂದ) ಚ್ಯಾಲೆಂಜಿAಗ್ ಸ್ಟಾರ್ ದರ್ಶನ್ ಜತೆ. ದರ್ಶನ್ ನಾಯಕ ನಟನಾಗಿ ಅಭಿನಯಿಸಿರುವ ಬಹುನಿರೀಕ್ಷಿತವಾದ ಹೊಸ ಚಿತ್ರವಾದ ‘ಒಡೆಯ’ ಚಿತ್ರದ ನಾಯಕಿಯಾಗಿ ತನ್ವಿ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಚಿತ್ರರಂಗಕ್ಕೆ ಪದಾರ್ಪಣೆ ಬಳಿಕ ತನ್ವಿಯ ಮೂಲ ಹೆಸರು ಬದಲಾಗಿದೆ. ಆರಂಭದಲ್ಲಿ ರಾಗವಿ ಎಂದಿತ್ತಾದರೂ ಇದೀಗ ಈಕೆ ಸಾನಾ ತಿಮ್ಮಯ್ಯ ಎಂದು ಚಂದನವನಕ್ಕೆ ಪರಿಚಿತಳಾಗಲಿದ್ದಾಳೆ.

ಸ್ನೇಹಾಚಾರದ ಮೂಲಕ ಅವಕಾಶ

೨೦೧೫ರಲ್ಲಿ ಮೈಸೂರು ಮೆಗಾ ಮಾಡಲಿಂಗ್ ವಿಜೇತೆಯಾಗಿದ್ದ ತನ್ವಿ (ಸಾನಾ) ಬಳಿಕ ಮಾಡಲಿಂಗ್ ಗುರು ಪ್ರಸಾದ್ ಬಿದ್ದಪ್ಪ ಅವರ ಅಧೀನದಲ್ಲಿ ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿರಿಸಿದ್ದಳು. ಬಿಕಾಂ ಪದವಿಯೊಂದಿಗೆ ಜ್ಯುವೆಲ್ಲರಿ ಡಿಸೈನಿಂಗ್ ಹಾಗೂ ಥಿಯೇಟರ್ ಕ್ಲಾಸ್‌ಗೆ ಸೇರ್ಪಡೆಗೊಂಡಿದ್ದ ಈಕೆಗೆ ಚಲನಚಿತ್ರದಲ್ಲಿ ನಟಿಸುವ ಅಭಿಲಾಷೆ ಇತ್ತಾದರೂ ಅವಕಾಶ ಕೂಡಿ ಬಂದಿರಲಿಲ್ಲ.

ಈ ಸಂದರ್ಭದಲ್ಲಿ ಈಕೆಯ ತಾಯಿ ಬೀನಾಳ ಹಿತೈಷಿ ಹಾಗೂ ಸ್ನೇಹಿತೆಯಾಗಿರುವ ಗೋಣಿಕೊಪ್ಪ ಅತ್ತೂರುವಿನ ಅಪ್ಪನೆರವಂಡ ಶಾಂತಿ ಅಚ್ಚಪ್ಪ ಅವರಿಗೆ ವಿಚಾರ ತಿಳಿದಿದೆ. ಶಾಂತಿ ಅಚ್ಚಪ್ಪ ಹಾಗೂ ಮೂಲತಃ ಪೊನ್ನಂಪೇಟೆಯವರಾದ ದರ್ಶನ್ ತಾಯಿ ಮೀನಾ ತೂಗುದೀಪ ಶ್ರೀನಿವಾಸ್ ಆತ್ಮೀಯ ಸ್ನೇಹಿತರು. ಶಾಂತಿ ಅಚ್ಚಪ್ಪ ಈ ಬಗ್ಗೆ ಮೀನಾ ಮೂಲಕ ದರ್ಶನ್‌ಗೆ ತಿಳಿಸಿದರೂ ಆ ಸಂದರ್ಭದಲ್ಲಿ ದರ್ಶನ್ ಈ ಬಗ್ಗೆ ಹೆಚ್ಚು ಆಸಕ್ತಿ ತೋರಲಿಲ್ಲ. ಈ ವಿಚಾರದಲ್ಲಿ ದರ್ಶನ್ ‘ಖಡಕ್’ ಎಂದು ಹೇಳಲಾಗಿದೆ. ಬಳಿಕ ನಿರ್ದೇಶಕರಾದ ಎಂ.ಬಿ. ಶ್ರೀಧರ್ ಅವರನ್ನು ಭೇಟಿಯಾಗಲಾಗಿತ್ತು. ಅವರ ಹೊಸಚಿತ್ರಕ್ಕೆ ಸುಮಾರು ಎಂಟು ಆಡಿಷನ್ ಬಳಿಕ ತನ್ವಿ ಆಯ್ಕೆಯಾಗಿದ್ದಾಳೆ. ಅದೂ ಒಟ್ಟು ೮೦ ಮಂದಿಯ ಪೈಕಿ ಈಕೆ ಆಯ್ಕೆಯಾಗಿದ್ದು ವಿಶೇಷ.

೨೦೧೮ರ ಸೆಪ್ಟೆಂಬರ್‌ನಲ್ಲಿ ಹೊಸ ಚಿತ್ರ ‘ ಒಡೆಯ’ದ ಚಿತ್ರೀಕರಣ ಶುರುವಾಗಿದ್ದರೂ ಕಾರಣಾಂತರಗಳಿAದ ಚಿತ್ರೀಕರಣ ಪೂರ್ಣಗೊಂಡಿರಲಿಲ್ಲ. ಇದೀಗ ಮೊನ್ನೆ ಮೊನ್ನೆ ತಾನೆ ಸ್ವಿಜರ್‌ಲ್ಯಾಂಡ್‌ನಲ್ಲಿ ಅಂತಿಮ ಎರಡು ಹಾಡುಗಳ ಚಿತ್ರೀಕರಣದ ಬಳಿಕ ‘ಒಡೆಯ’ ತೆರೆ ಕಾಣಲು ಸಿದ್ಧವಾಗಿದೆ. ಮುಂದಿನ ವಾರದಲ್ಲಿ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.

ಈ ಚಿತ್ರದಲ್ಲಿ ತನ್ವಿ, ಸಾನಾ ಆಗಿ ಚಿತ್ರರಂಗಕ್ಕೆ ಪರಿಚಿತಳಾಗುತ್ತಿದ್ದಾಳೆ. ಚೊಚ್ಚಲ ಚಿತ್ರದಲ್ಲೇ ಸ್ಟಾರ್ ನಟನೊಂದಿಗೆ ಅಭಿನಯಿಸಿರುವ ಅನುಭವದ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಆಕೆ ದರ್ಶನ್‌ರಂತಹ ಸೂಪರ್‌ಸ್ಟಾರ್ ಜತೆ ಅವಕಾಶ ಲಭಿಸಿದ್ದು, ತುಂಬಾ ಖುಷಿಯಾಗುತ್ತಿದೆ. ಅವರಿಂದ ಕಲಿಯಲು ಸಾಕಷ್ಟಿದೆ. ಅವರ ಬಗ್ಗೆ ಅವರ ಉತ್ತಮ ನಡತೆ ಬಗ್ಗೆ ಮಾತನಾಡಲು ತಾನು ತುಂಬಾ ಚಿಕ್ಕವಳು ಎಂದಳು. ಈ ಚಿತ್ರ ಸಂಪೂರ್ಣವಾಗಿ ಕೌಟುಂಬಿಕ ಚಿತ್ರವಾಗಿದ್ದು, ತನಗೆ ಉತ್ತಮ ಪಾತ್ರ ದೊರೆತಿದ್ದು, ಚಿತ್ರಾಭಿಮಾನಿಗಳು ಉತ್ತೇಜಿಸುವಂತೆ ಮನವಿ ಮಾಡಿದಳು. ಈಕೆಯ ತಾಯಿ ಬೀನಾ ಪ್ರತಿಕ್ರಿಯಿಸಿ ಪುತ್ರಿಯ ಆಸಕ್ತಿಗೆ ಇದೊಂದು ಉತ್ತಮ ಅವಕಾಶ ಸಿಕ್ಕಿದೆ. ಈಕೆಗೆ ಎಲ್ಲರ ಆಶೀರ್ವಾದ ಇರಲಿ ಎಂದರು. ‘ಒಡೆಯ’ ಬಹುಶಃ ಡಿಸೆಂಬರ್ ೨ನೇ ವಾರದಲ್ಲಿ ತೆರೆಕಾಣಲಿದೆ.

-ಶಶಿ