ಸೋಮವಾರಪೇಟೆ, ನ. ೨: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳ ಪ್ರದರ್ಶನಕ್ಕೆ ಹಿಂದೇಟು ಹಾಕಬಾರದು. ಪ್ರತಿಭೆಯನ್ನು ಹೊರಸೂಸುವ ಅವಕಾಶಗಳಿಂದ ವಂಚಿತರಾಗ ಬಾರದು ಎಂದು ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ ಹೇಳಿದರು.

ತಾಲೂಕು ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆಯ ವತಿಯಿಂದ ಇಲ್ಲಿನ ಪ.ಪಂ. ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ಕಲಾಶ್ರೀ ಆಯ್ಕೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೃಜನಾತ್ಮಕ ಕಲೆಗಳ ಅನಾವರಣಕ್ಕೆ ಕಲಾಶ್ರೀ ಆಯ್ಕೆ ಶಿಬಿರ ಉತ್ತಮ ವೇದಿಕೆಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಪಾರ ಕಲೆಗಳಿದ್ದು, ಅವುಗಳಿಗೆ ಪ್ರೋತ್ಸಾಹದ ಅಗತ್ಯವಿದೆ. ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲೂ ಸಾಧನೆ ಮಾಡಬೇಕು. ತೀರ್ಪುಗಾರರು ಹಂಸಕ್ಷೀರ ನ್ಯಾಯದಂತೆ ತೀರ್ಪು ನೀಡಬೇಕು. ನಮ್ಮ ತಪ್ಪುಗಳಿಂದ ಪ್ರತಿಭೆಗಳಿಗೆ ಮೋಸ ಆಗಬಾರದು ಎಂದರು. ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ ಮಾತನಾಡಿ, ಸರ್ಕಾರಿ ಶಾಲೆಗಳಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಬೋಧನೆ ಇದೆ. ಸರ್ಕಾರದಿಂದಲೂ ಹಲವಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಶಾಲೆಯಲ್ಲಿ ಓದಿದವರೇ ಹೆಚ್ಚಿನ ಸಾಧನೆ ತೋರಿದ್ದಾರೆ ಎಂದರು.

ಸಿಆರ್‌ಪಿ ಕಾಜೂರು ಸತೀಶ್ ಮಾತನಾಡಿ, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವಗಳಿಗಿಂತ ಕಲಾಶ್ರೀ ಆಯ್ಕೆ ಶಿಬಿರ ಭಿನ್ನವಾಗಿದ್ದು, ಮಕ್ಕಳ ಪ್ರತಿಭೆಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಬಿಆರ್‌ಪಿ ಲೋಕೇಶ್, ಸಿಆರ್‌ಪಿ ಅಶೋಕ್, ಮಹಿಳಾ ಮೇಲ್ವಿಚಾರಕಿ ನಿರ್ಮಲ, ಸಿಬ್ಬಂದಿ ಫಿಲೋಮಿನಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ತಾಲೂಕಿನ ೯ ವರ್ಷದಿಂದ ೧೪ ವರ್ಷದೊಳಗಿನ ಮಕ್ಕಳಿಗಾಗಿ ಕಲಾಶ್ರೀ ಆಯ್ಕೆ ಶಿಬಿರ ಹಾಗೂ ಗಾಂಧಿ ಜಯಂತಿ ಅಂಗವಾಗಿ ೫ ರಿಂದ ೧೬ ವರ್ಷದೊಳಗಿನ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ನಡೆಯಿತು. ಕಲಾಶ್ರೀ ಆಯ್ಕೆ ಶಿಬಿರದಲ್ಲಿ ಸೃಜನಾತ್ಮಕ ಕಲೆ, ಬರವಣಿಗೆ, ಪ್ರಬಂಧ, ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ಥಾನಿ ಶಾಸ್ತಿçÃಯ ಸಂಗೀತ, ವಾದ್ಯ ಸಂಗೀತ, ಯಕ್ಷಗಾನ, ಯಕ್ಷಿಣಿ ಪ್ರದರ್ಶನ, ಸುಗಮ ಸಂಗೀತ, ಏಕ ಪಾತ್ರಾಭಿನಯ, ಯೋಗ, ನೃತ್ಯ, ಸಂಗೀತ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜ್ಞಾನದಲ್ಲಿ ನೂತನ ಆವಿಷ್ಕಾರ ವಿಭಾಗದಲ್ಲಿ ಮಾದರಿ ಪ್ರದರ್ಶನ ಹಾಗೂ ವಿವರಣೆ, ಪ್ರಶ್ನೆಗಳಿಗೆ ಉತ್ತರಿಸುವಿಕೆಯ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗಿಯಾಗಿದ್ದರು. ತಾ. ೫ ರಂದು ಮಡಿಕೇರಿಯಲ್ಲಿ ಜಿಲ್ಲಾಮಟ್ಟದ ಆಯ್ಕೆ ಶಿಬಿರ ನಡೆಯಲಿದೆ ಎಂದು ಮಹಿಳಾ ಮೇಲ್ವಿಚಾರಕಿ ನಿರ್ಮಲ ಮಾಹಿತಿ ನೀಡಿದರು.