*ಗೋಣಿಕೊಪ್ಪಲು, ಅ. 31: ಹೆಣ್ಣು ಮಕ್ಕಳು ಶಾಲಾ-ಕಾಲೇಜಿಗೆ ಬರುವಾಗ ಕಾಫಿ ತೋಟದಲ್ಲಿ ಒಬ್ಬರೇ ಬರಕೂಡದು. ರಸ್ತೆ ಸಿಗುವವರೆಗೆ ಯಾರಾದರೂ ಸಂಬಂಧಿಕರನ್ನು ಜತೆಗೆ ಕರೆದುಕೊಂಡು ಬರಬೇಕು ಎಂದು ಪೊನ್ನಂಪೇಟೆ ಪೊಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ಕುಮಾರ್ ಹೇಳಿದರು.

ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಹಾಗೂ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮ ಕುರಿತು ಮಾತನಾಡಿದ ಅವರು, ಅಸ್ಸಾಂ ರಾಜ್ಯದಿಂದ ಕಾಫಿ ತೋಟದ ಕೆಲಸಕ್ಕೆ ಬಂದಿರುವ ಕಾರ್ಮಿಕರಿಂದ ಬಹಳಷ್ಟು ಅಪಾಯಗಳು ಸಂಭವಿಸುತ್ತಿವೆ. ಇದಕ್ಕೆ ಸಿದ್ದಾಪುರ ಬಳಿಯ ನೆಲ್ಲಿಹುದಿಕೇರಿಯಲ್ಲಿ ನಡೆದ ಘಟನೆಯೇ ಸಾಕ್ಷಿ. ಅಲ್ಲಿನ ಪಿಯು ಕಾಲೇಜಿನ ಅಮಾಯಕ ಹೆಣ್ಣು ಮಗಳ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಕೊಂದು ಹಾಕಿದ್ದರು. ಇಂತಹ ಘಟನೆ ಮತ್ತೆ ಮರುಕಳಿಸದಂತೆ ಹೆಣ್ಣು ಮಕ್ಕಳೇ ಎಚ್ಚುತ್ತುಕೊಳ್ಳಬೇಕು ಎಂದು ತಿಳಿಸಿದರು.

ಕೊಡಗಿನಲ್ಲಿ ಅಲ್ಲಲ್ಲಿ ಗಾಂಜಾ ಗಿಡಗಳನ್ನು ಬೆಳೆಯಲಾಗುತ್ತಿದೆ. ಆರೋಗ್ಯಕ್ಕೆ ಹಾನಿಕರವಾಗಿರುವ ಗಾಂಜಾ ಬೆಳೆಯುವದು, ಅದನ್ನು ಮಾರಾಟ ಮಾಡುವದು, ಸೇವನೆ ಮಾಡುವದು ಅಪರಾಧವಾಗಿದೆ. ಇದರ ಬಗ್ಗೆ ಎಲ್ಲಿಯಾದರೂ ಸುಳಿವು ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ತಿಳಿಸಬೇಕು. ಮಾದಕ ದ್ರವ್ಯಗಳಿಂದ ದೂರವಿರಬೇಕು ಎಂದು ತಿಳಿಸಿದರು.

ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಕೆ.ಜಿ. ಅಶ್ವಿನಿಕುಮಾರ್, ಹೇಮಲತಾ ಮಾತನಾಡಿದರು. ಎಎಸ್‍ಐ ಉದಯ, ಉಪನ್ಯಾಸಕರಾದ ಎನ್.ಕೆ. ಪ್ರಭು, ಎಂ.ಪಿ. ರಾಘವೇಂದ್ರ, ಬೆನಡಿಕ್ಡ್ ಫರ್ನಾಂಡೀಸ್, ಪಿ.ಎ. ಪ್ರಭುಕುಮಾರ್ ಹಾಜರಿದ್ದರು.