ಸೋಮವಾರಪೇಟೆ, ಅ. 31: ಸೋಮವಾರಪೇಟೆ-ಬಾಣಾವರ-ಕೊಣನೂರು ರಾಜ್ಯ ಹೆದ್ದಾರಿಯಲ್ಲಿರುವ ಅಬ್ಬೂರುಕಟ್ಟೆ ಜಂಕ್ಷನ್‍ನಲ್ಲಿ ಬ್ಯಾರಿಕೇಡ್ ಅಳವಡಿಸದೇ ಇರುವದರಿಂದ ವಾಹನಗಳ ವೇಗಕ್ಕೆ ಮಿತಿಯಿಲ್ಲದಂತಾಗಿದೆ.

ಅಬ್ಬೂರುಕಟ್ಟೆ ಜಂಕ್ಷನ್‍ನಲ್ಲಿ ಮೂರು ರಸ್ತೆಗಳು ಕೂಡುತ್ತಿದ್ದು, ದಿನಂಪ್ರತಿ ಬೆಳಿಗ್ಗೆ ಮತ್ತು ಸಂಜೆ ಜನಸಂಚಾರದೊಂದಿಗೆ ವಾಹನಗಳ ಸಂಚಾರ ಅಧಿಕವಿದೆ. ಸೋಮವಾರಪೇಟೆ, ಕೊಣನೂರು ಮತ್ತು ಸೀಗೇಹೊಸೂರಿಗೆ ತೆರಳುವ ಜಂಕ್ಷನ್ ಇದಾಗಿದ್ದು, ಈ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸುವ ಅಗತ್ಯ ಹೆಚ್ಚಿದೆ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.

ಈ ಹಿಂದೆ ಇದ್ದಂತಹ ಬ್ಯಾರಿಕೇಡ್‍ಗಳನ್ನು ಕಳೆದ ಐದು ತಿಂಗಳ ಹಿಂದೆ ‘ಪೈಂಟಿಂಗ್’ಗೆಂದು ಪೊಲೀಸರು ತೆಗೆದುಕೊಂಡು ಹೋಗಿದ್ದು, ನಂತರ ಬ್ಯಾರಿಕೇಡ್ ಅಳವಡಿಸಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಅಬ್ಬೂರುಕಟ್ಟೆಯ ಜಂಕ್ಷನ್‍ನಲ್ಲಿ ದಿನಂಪ್ರತಿ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸ ಕಾರ್ಯಗಳಿಗೆ ತೆರಳುವ ಸಾರ್ವಜನಿಕರು ಬಸ್ ಸೇರಿದಂತೆ ಇತರ ವಾಹನಗಳಿಗೆ ಕಾಯುತ್ತಿರುತ್ತಾರೆ. ವಿದ್ಯಾರ್ಥಿಗಳು ಅತ್ತಿಂದಿತ್ತ ಸಾಗುತ್ತಿರುತ್ತಾರೆ. ಈ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸದೇ ಇರುವದರಿಂದ ವಾಹನಗಳು ಅತೀ ವೇಗದಿಂದ ಸಂಚರಿಸುತ್ತಿದ್ದು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಭಯದಿಂದಲೇ ರಸ್ತೆ ದಾಟುವಂತಾಗಿದೆ.

ಈ ಹಿನ್ನೆಲೆ ಪೊಲೀಸ್ ಇಲಾಖೆಯ ವತಿಯಿಂದ ಜಂಕ್ಷನ್‍ನಲ್ಲಿ ಬ್ಯಾರಿಕೇಡ್ ಅಳವಡಿಸಿ, ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕಿದೆ ಎಂದು ಸ್ಥಳೀಯರು ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.