ವೀರಾಜಪೇಟೆ, ಅ. 30: ಮುಸ್ಲಿಮ್ ಬಾಂಧವರು ಮುಂದಿನ ತಿಂಗಳು ಪ್ರವಾದಿ ಮುಹಮ್ಮದ್ ಜನ್ಮ ದಿನಾಚರಣೆ (ಈದ್ ಮಿಲಾದ್) ಆಚರಿಸಲಿರುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯ ಎಲ್ಲಾ ಮಸೀದಿ ಪ್ರಮುಖರ ಸಭೆಯೊಂದನ್ನು ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಲಾಗಿತ್ತು. ಈ ಸಂದರ್ಭ ಡಿವೈಎಸ್ಪಿ ಜಯಕುಮಾರ್ ಮಾತನಾಡಿ, ನಗರದಲ್ಲಿ ಶಾಂತಿ ಕಾಪಾಡುವಲ್ಲಿ ಎಲ್ಲಾ ವಿಭಾಗದ ಜನರು ಇಲಾಖೆಯೊಂದಿಗೆ ಸಹಕರಿಸಬೇಕು. ಈದ್ ಮಿಲಾದ್ ಸಂದರ್ಭ ಆಯಾ ಮಸೀದಿ ಸಮಿತಿಯವರು ತಾವುಗಳು ಆಯೋಜಿಸುವ ಮೆರವಣಿಗೆ, ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಭೆಗಳ ಬಗ್ಗೆ ಇಲಾಖೆಗೆ ಮೊದಲೇ ತಿಳಿಸಿ ಅನುಮತಿ ಪಡೆಯಬೇಕು ಎಂದರು.
ಅನ್ವಾರುಲ್ ಹುದಾ ಸಂಸ್ಥೆಯ ಯಾಕೂಬ್, ಮದೀನಾ ಮಸೀದಿಯ ಎಸ್.ಹೆಚ್. ಮೊಯಿನುದ್ದೀನ್.ಶಾಫಿ ಜುಮಾ ಮಸೀದಿಯ ಪಿ.ಎ. ಫವಾಝ್, ಗುಂಡಿಕೆರೆ ಜಮಾಅತ್ನ ಪಿ.ಎಂ. ಅಬ್ಬಾಸ್ ಮುಂತಾದವರು ಸಲಹೆಗಳನ್ನು ಮುಂದಿಟ್ಟರು. ಶಾದುಲಿ ಜುಮಾ ಮಸೀದಿಯ ಹುಸೈನ್, ಸಲಫಿ ಜುಮಾ ಮಸೀದಿಯ ಎನ್.ಕೆ. ಶರೀಫ್, ಮಸ್ಜಿದ್-ಎ-ಅಝಂನ ಅಧ್ಯಕ್ಷ ಎಂ.ವೈ. ನಿಸಾರ್ ಅಹಮದ್, ಜಾಮಿಯಾ ಮಸೀದಿಯ ಶಬೀರ್ ಅಹಮದ್, ಗಡಿಯಾರ ಕಂಬದ ಸಮೀಪದ ಮುರುಡೇಶ್ವರ್ ಮುಸ್ಲಿಮ್ ಜಮಾಅತ್ನ ಅಧ್ಯಕ್ಷ ದಿಲ್ದಾರ್ ಬಾಷ ಹಾಜರಿದ್ದರು. ನಗರ ಠಾಣಾಧಿಕಾರಿ ಮರಿಸ್ವಾಮಿ ಸ್ವಾಗತಿಸಿದರು. ವೃತ್ತ ಪೊಲೀಸ್ ನಿರೀಕ್ಷಕ ಕ್ಯಾತೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.